ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಲೋಕಸಭೆ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಗ್ರಾಮೀಣ ಭಾಗದ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಯತ್ತ ಆಗಮಿಸುತ್ತಿದ್ದ ಜನರು, ಬಿರು ಬಿಸಿಲನ್ನೂ ಲೆಕ್ಕಿಸದೆ ಸಂಜೆವರೆಗೆ ಮತದಾನ ಮಾಡಿದರು. ಬಹುತೇಕ ಕಡೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು.
ತಾಲೂಕಿನ ಕೆಲಗೇರಿ, ರಾಮಾಪುರ, ಕೋಟೂರ, ಗರಗ, ಕಲ್ಲಾಪುರ, ಸಿದ್ದಾಪುರ, ಮುಗದ, ಉಪ್ಪಿನಬೆಟಗೇರಿ, ಕಮಲಾಪುರ ಸೇರಿ ಇತರ ಗ್ರಾಮಗಳಲ್ಲಿ ಮತದಾನ ತುರುಸಿನಿಂದ ಕೂಡಿತ್ತು. ಬೆಳಗ್ಗೆಯಿಂದಲೇ ಜನರು ಮತಗಟ್ಟೆಗಳತ್ತ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಅಂಗವಿಕಲರು, ಹಿರಿಯ ನಾಗರಿಕರು ಸಹ ಮೊಮ್ಮಕ್ಕಳು, ಮಕ್ಕಳ ನೆರವಿನೊಂದಿಗೆ ಆಗಮಿಸಿ ಮತದಾನ ಮಾಡಿದರು.
ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ತಾಪ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ವಿವಿಧ ಗ್ರಾಮಗಳಲ್ಲಿ ಬಹುತೇಕ ಜನರು ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಆದರೆ ಕೆಲ ಕಡೆಗಳಲ್ಲಿ ಬಿಸಿಲಿನ ತಾಪವನ್ನೂ ಲೆಕ್ಕಿಸದ ಜನರು ಮಧ್ಯಾಹ್ನದ ಹೊತ್ತಿನಲ್ಲೂ ಮತಗಟ್ಟೆಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡು ಬಂದವು. ಯುವ ಮತದಾರರು, ಇದೇ ಮೊದಲ ಬಾರಿ ತಮ್ಮ ಹಕ್ಕು ಚಲಾಯಿಸಲು ಆಗಮಿಸಿದವರಲ್ಲಿ ಉತ್ಸಾಹ ತುಸು ಹೆಚ್ಚೇ ಇತ್ತು.
85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತ ಚಲಾಯಿಸಲು ಆಯೋಗ ಅವಕಾಶ ನೀಡಿದ್ದರು. ಆದರೆ ಗ್ರಾಮೀಣ ಭಾಗದ ಬಹುತೇಕ ಜನರು ಇದರ ಪ್ರಯೋಜನ ಪಡೆದಂತೆ ಕಾಣಲಿಲ್ಲ. 85 ವರ್ಷದಿಂದ 100 ವರ್ಷ ದಾಟಿದವರೂ ಮತಗಟ್ಟೆಗಳಿಗೆ ಇತರರ ಸಹಾಯದೊಂದಿಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಯುವಕರೂ ನಾಚುವಂತೆ ಮಾಡಿದರು.
ಮತಗಟ್ಟೆಯಲ್ಲಿ ಸಕಲ ಸೌಲಭ್ಯ: ಬಿಸಿನ ಝಳ ಹೆಚ್ಚಿರುವ ಕಾರಣಕ್ಕೆ ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರು, ಆರೋಗ್ಯ ಸೇವೆಯನ್ನು ಕಲ್ಪಿಸಲಾಗಿತ್ತು. ಮತ ಚಲಾಯಿಸಲು ಆಗಮಿಸಿದ ಜನರಿಗೆ ಆರೋಗ್ಯ ಸಮಸ್ಯೆ ಎದುರಾದರೆ ಅಗತ್ಯ ಔಷಧೋಪಚಾರ ವ್ಯವಸ್ಥೆಯ ಜತೆಗೆ ಒಆರ್ಎಸ್ ಪಾಕೆಟ್ ಸಹ ಇಡಲಾಗಿತ್ತು.
ಮೊಬೈಲ್ ಬಳಕೆ ನಿಷೇಧ: ಮತಗಟ್ಟೆ ಒಳಗೆ ಮೊಬೈಲ್ ಒಯ್ಯುವುದನ್ನು ಬಹುತೇಕ ಕಡೆಗಳಲ್ಲಿ ನಿಷೇಧಿಸಲಾಗಿತ್ತು. ಪ್ರತಿ ಮತಗಟ್ಟೆ ಹೊರ ಭಾಗದಲ್ಲಿ ಪೊಲೀಸ್ ಅಧಿಕಾರಿ ಇಲ್ಲವೇ ಗ್ರಾಮದ ಒಬ್ಬರನ್ನು ಕೂರಿಸಲಾಗಿತ್ತು. ಅವರು ಮತದಾರರ ಮೊಬೈಲ್ಗಳನ್ನು ಇಸಿದುಕೊಂಡು ಒಳ ಬಿಡುತ್ತಿದ್ದರು. ಮತ ಚಲಾಯಿಸಿ ಬಂದ ನಂತರ ಅವರ ಮೊಬೈಲ್ಗಳನ್ನು ಮರಳಿ ನೀಡಲಾಗಿತ್ತು. ಕೆಲ ಮತಗಟ್ಟೆಗಳಲ್ಲಿ ಮಾತ್ರ ಈ ಕಾರ್ಯ ನಡೆಯುತ್ತಿರಲಿಲ್ಲ.