ಚನ್ನಗಿರಿ: ತಾಲೂಕಿನ ಕಂಚಿಗನಾಳು ಗ್ರಾಪಂ ನೂತನ ಅಧ್ಯಕ್ಷ-ಮತ್ತು ಉಪಾಧ್ಯಕ್ಷರಾಗಿ ಜಿ.ಎಸ್. ದೇವಮ್ಮ ಮಂಜಪ್ಪ ಹಾಗೂ ಎ. ರಂಗಪ್ಪ ಅವಿರೋಧ ಆಯ್ಕೆಯಾದರು.
ಸ್ವಾಭಿಮಾನಿ ಬಳಗದ ಪಕ್ಷೇತರ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ ಹಾಗೂ ಮಾಜಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಬೆಂಬಲಿತರಾದ ಜಿ.ಎಸ್. ದೇವಮ್ಮ ಮಂಜಪ್ಪ ಹಾಗೂ ಎ.ರಂಗಪ್ಪ ಗುರುವಾರ ಆಯೋಜಿಸಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ತಲಾ ಏಕೈಕ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಸಿಡಿಪಿಒ ಸದಾನಂದ ಆಯ್ಕೆ ಘೋಷಣೆ ಮಾಡಿದರು.
ಗ್ರಾಪಂ ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಸರ್ವ ಸದಸ್ಯರು, ಮುಖಂಡರ ಅಭಿಪ್ರಾಯ, ಸಹಕಾರದೊಂದಿಗೆ ಎಲ್ಲ ಕೆಲಸಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಲಾಗುವುದು ಎಂದು ಅಧ್ಯಕ್ಷೆ ಜಿ.ಎಸ್. ದೇವಮ್ಮ ಹೇಳಿದರು.
ದೇಶ ಅಭಿವೃದ್ಧಿ ಹೊಂದಬೇಕಾದರೆ ಮೊದಲು ಗ್ರಾಮಗಳ ಪ್ರಗತಿ ಆಗಬೇಕು. ಅದಕ್ಕಾಗಿ ಸರ್ಕಾರ ಗ್ರಾಪಂಗಳಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. ಅದರ ಸದ್ಬಳಕೆ ಸರಿಯಾಗಿ ಆಗಬೇಕು. ನನಗೆ ನೀಡಿದ ಅಧಿಕಾರದ ಅವಧಿಯಲ್ಲಿ ಶಿಕ್ಷಣ, ಕುಡಿಯುವ ನೀರು ಮತ್ತು ಗ್ರಾಮದ ರಸ್ತೆಗಳನ್ನು ಅಭಿವೃದ್ಧ್ದಿ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದರು.
ಗ್ರಾಪಂ ಸದಸ್ಯರಾದ ಕೆ. ಶೇಖರಪ್ಪ, ಕೃಷ್ಣಮೂರ್ತಿ ಬೆಟ್ಟಕಡೂರು, ಶಾಂತಾನಾಯ್ಕ, ರುದ್ರಪ್ಪ, ಮಂಗಳಬಾಯಿ ಶಾಂತಾನಾಯ್ಕ, ರಂಗಮ್ಮ, ದೇವರಾಜ್, ಪ್ರತಿಮಾ ರಂಗಸ್ವಾಮಿ, ಗ್ರಾಮದ ಮುಖಂಡರಾದ ಯೋಗರಾಜ್, ಸತೀಶ್ ಕಲ್ಲಪ್ಳರ್, ಷಣ್ಮುಖಪ್ಪ, ಪಿ. ತಿಪ್ಪೇಸ್ವಾಮಿ, ಎಲ್‌ಐಸಿ ರವಿ, ವೆಂಕಟೇಶ್‌ನಾಯ್ಕ ಇದ್ದರು.