ನವೀನ್ ಶೆಟ್ಟಿ ಕೆರಾಡಿ ಆನೇಕಲ್
ಹೊಸೂರು&ಬೆಂಗಳೂರು ಹೆದ್ದಾರಿಯಲ್ಲಿ ಸರಿಯಾದ ರಸ್ತೆ ನಿರ್ವಹಣೆ ಇಲ್ಲದೆ ಪ್ರತಿದಿನ ಟ್ರಾಫಿಕ್ ಜಾಮ್ ಹಾಗೂ ಅಪಘಾತಗಳಾಗುವುದು ಸಾಮಾನ್ಯವಾಗಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೊಸೂರು&ಬೆಂಗಳೂರು ಮುಖ್ಯರಸ್ತೆಯ ಹಳೆಯ ಚಂದಾಪುರದ ಬಳಿ ರಸ್ತೆ ತಿರುವು ಅವೈಾನಿಕವಾಗಿ ಮಾಡಲಾಗಿದ್ದು, ಸರಿಯಾದ ನಿರ್ವಹಣೆ ಹಾಗೂ ಸಿಗ್ನಲ್ ಅಳವಡಿಕೆ ಇಲ್ಲದೆ, ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ, ಅಪಘಾತಗಳಾಗಿ ಹಲವರು ಜೀವ ಕಳೆದುಕೊಂಡರೆ, ಮತ್ತೆ ಕೆಲವರು ಗಾಯಗೊಂಡಿದ್ದಾರೆ.
ಹೊಸೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಹೊಸೂರಿಗೆ ಪ್ರತಿ ದಿನ ಲಾಂತರ ವಾಹನಗಳು ಸಂಚಾರ ಮಾಡುತ್ತವೆ. ಚಂದಾಪುರದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಹಳೆಯ ಚಂದಾಪುರ ಸಿಗುತ್ತದೆ. ಇಲ್ಲಿ ಚಂದಾಪುರದಿಂದ ಹೋಗುವವರು ಬಲಕ್ಕೆ ತಿರುವು ತೆಗೆದುಕೊಳ್ಳಬೇಕು, ಆದರೆ ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಯಾವುದೇ ಎಚ್ಚರಿಕೆ ಫಲಕ ಆಗಲಿ ಅಥವಾ ಸಿಗ್ನಲ್ ಇಲ್ಲದೆ ಇರುವುದರಿಂದ ಪದೇಪದೇ ಅಪಘಾತಗಳು ಆಗುತ್ತಿರುತ್ತವೆ, ಇನ್ನೊಂದೆಡೆ ಅಕ್ಕಪಕ್ಕದ ಊರಿನವರು ಚಂದಾಪುರ ಆನೇಕಲ್ ಹಾಗೂ ಬೆಂಗಳೂರಿಗೆ ಹೋಗಬೇಕಾದರೆ ಇದೆ ಹೆದ್ದಾರಿ ಮೂಲಕ ರಸ್ತೆಗೆ ಎಂಟ್ರಿ ಕೊಡಬೇಕು. ಇಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಿದ್ದರೆ ಅಥವಾ ಮೇಲ್ಸೇತುವೆ ನಿರ್ಮಾಣ ಆಗಿದ್ದರೆ ಅಪಘಾತ ಆಗುತ್ತಿರಲಿಲ್ಲ. ಅಪಘಾತಗಳಾದಾಗಲೂ ಹೆದ್ದಾರಿ ಪ್ರಾಧಿಕಾರದವರು ಸ್ಪಂದಿಸುತ್ತಿಲ್ಲ.
ಸಂಸದ, ಮಾಜಿ ಸಂಸದರ ಸೂಚನೆಗೂ ಸಿಕ್ಕಿಲ್ಲ ಬೆಲೆ : ಶನಿವಾರ ಹಾಗೂ ಸೋಮವಾರ ಈ ಭಾಗದಲ್ಲಿ ಚಂದಾಪುರ ಸಂತೆ ಮಾರುಕಟ್ಟೆಯಲ್ಲಿ ಸಾವಿರಾರು ಜನ ಸೇರುತ್ತಾರೆ, ಈ ಸಂದರ್ಭದಲ್ಲಿ ಕಿ.ಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುತ್ತಾರೆ. ಕೆಲವು ದಿನಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಹತ್ತಾರು ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ಇದೆ, ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್ಗಳು ಸಂಚರಿಸಲು ಜಾಗವಾಗುವುದಿಲ್ಲ. ಈ ಹಿಂದೆ ಸಂಸದರಾಗಿದ್ದ ಡಿ.ಕೆ.ಸುರೇಶ್ ಹಾಗೂ ಹಾಲಿ ಸಂಸದ ಡಾ.ಸಿ. ಎನ್ ಮಂಜುನಾಥ್ ವಾಹನ ಸವಾರರಿಗೆ ಕಿರಿಕಿರಿ ಆಗುತ್ತಿರುವ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದರು, ರಸ್ತೆಯಲ್ಲಿ ಆಗುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಹಿಂದೆ ಹಲವು ಬಾರಿ ಕಿರಿಯ ಪೊಲೀಸ್ ಅಧಿಕಾರಿಗಳು ಕೂಡ ಪರಿಶೀಲನೆ ಮಾಡಿ ಹೋಗಿದ್ದಾರೆ. ಆದರೆ ಇದುವರೆಗೂ ಕೂಡ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ಸಾಕಷ್ಟು ಸಮಸ್ಯೆಗಳು ಹೆದ್ದಾರಿಯಲ್ಲಿ ಇದ್ದು, ವಾಹನ ಸವಾರರಿಗೆ ಸಮಸ್ಯೆ ಆಗುತ್ತಿದ್ದರು ಬೇಜವಾಬ್ದಾರಿ ತೋರುತ್ತಿದ್ದಾರೆ.
ಸ್ಥಳ ಪರಿಶೀಲಿಸಿದ ಸಂಸದ : ಕಳೆದ ವಾರ ಹೆದ್ದಾರಿಯಲ್ಲಿ ಮಳೆಯ ಸಂದರ್ಭದಲ್ಲಿ ನೀರು ನಿಂತು ಸಮಸ್ಯೆ ಅದಾಗ ಸ್ಥಳಕ್ಕೆ ಭೇಟಿ ನೀಡಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಾ.ಸಿ.ಎನ್.ಮಂಜುನಾಥ್, ಸಮಸ್ಯೆಯನ್ನು ತುರ್ತಾಗಿ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಕೆಲವು ಕಾಮಗಾರಿಗಳು ಸಮಯ ತೆಗೆದುಕೊಳ್ಳುತ್ತಿದ್ದು ಇದನ್ನು ಕೂಡ ಬೇಗ ಮಾಡಲು ಸೂಚಿಸಿದ್ದೇನೆ ಎಂದು ಸಂಸದರು ಸುದ್ದಿಗಾರರಿಗೆ ತಿಳಿಸಿದ್ದರು.
ಹೆದ್ದಾರಿ ಪ್ರಾಧಿಕಾರ ಬೇಜವಾಬ್ದಾರಿ : ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಚನೆ ನೀಡಿದಾಗ ಎರಡು ದಿನ ತಲೆ ಕೆಡಿಸಿಕೊಳ್ಳುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತೆ ರ್ನಿಲಕ್ಷ$್ಯ ತೋರುತ್ತಿರುವುದೇ ಈ ಸಮಸ್ಯೆಗಳು ಮುಂದುವರಿಯಲು ಕಾರಣ. ಬೊಮ್ಮಸಂದ್ರದಿಂದ ನೆರಳೂರುವರೆಗೆ ಸುಮಾರು ಆರೇಳು ಕಿಲೋಮೀಟರ್ ಪ್ರತಿದಿನ ಟ್ರಾಫಿಕ್ನಲ್ಲಿ ಕೆಲಸಕ್ಕೆ ಹೋಗುವ ಕಾರ್ಮಿಕರು ಹಾಗೂ ಶಾಲಾ&ಕಾಲೇಜು ಹೋಗುವ ವಾಹನ ಸವಾರರು ರೋಸಿ ಹೋಗಿದ್ದಾರೆ.
ದಿನಕ್ಕೆ ನಾಲ್ಕೈದು ಅಪಘಾತ : ಅತ್ತಿಬೆಲೆಯಿಂದ ಚಂದಾಪುರದವರೆಗೆ ಹೆದ್ದಾರಿ ತಿರುವುಗಳು ಸರಿಯಾಗಿ ಇಲ್ಲದೆ, ಸಿಗ್ನಲ್ ಅಳವಡಿಕೆ ಮಾಡದೆ, ಕನಿಷ್ಠ ಸಿಬ್ಬಂದಿ ನಿಯೋಜನೆಯನ್ನೂ ಮಾಡುವುದಿಲ್ಲ. ಹೀಗಾಗಿ ಇಲ್ಲಿ ದಿನಕ್ಕೆ ನಾಲ್ಕೆ$ದು ಅಪಘಾತಗಳು ಆಗುತ್ತಿವೆ.