ಗಜೇಂದ್ರಗಡ: ಪಟ್ಟಣದ ಕುಷ್ಟಗಿ ರಸ್ತೆಯಿಂದ ಕೊರವರ ಓಣಿ ಮಾರ್ಗವಾಗಿ ಮೈಸೂರು ಮಠಕ್ಕೆ ತೆರಳುವ ಮಾರ್ಗದ ಕಾಮಗಾರಿ ಪ್ರಾರಂಭಗೊಂಡು ಹಲವು ತಿಂಗಳು ಕಳೆದರೂ ಜಲ್ಲಿಕಲ್ಲು ಹಾಕಿರುವುದನ್ನು ಬಿಟ್ಟರೆ ಮತ್ತೇನೂ ಪ್ರಗತಿ ಕಂಡಿಲ್ಲ. ಇದರಿಂದ ಜನ-ವಾಹನ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ.
ನಗರೋತ್ಥಾನ ಹಂತ 4ರಲ್ಲಿ 5.88 ಕೋಟಿ ರೂ. ಗಳಲ್ಲಿ 5 ಪ್ಯಾಕೇಜ್‌ನ ಕೆಲಸದಲ್ಲಿ ಇದೂ ಸೇರಿದೆ. ಜನವರಿಯಲ್ಲಿ ಕಾಮಗಾರಿ ಆರಂಭವಾದರೂ ಈಗ ಅರ್ಧಕ್ಕೆ ನಿಂತಿದೆ. ಪರಿಣಾಮ ನಿವಾಸಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.
ಈ ರಸ್ತೆ ಕಾಮಗಾರಿ ವಿಸ್ತೀರ್ಣ 560 ಮೀ. ಇದ್ದು, ಗುತ್ತಿಗೆದಾರರು ಕೆಲಸ ಪ್ರಾರಂಭಿಸಿದ್ದರು. ಆದರೆ, ಈ ರಸ್ತೆಗೆ ಹಿರೇಅಗಸಿಯಿಂದ ಮಳೆ ನೀರು ಬರುತ್ತದೆ. ಹೀಗಾಗಿ ಇಲ್ಲಿ ಡಾಂಬರ್ ರಸ್ತೆ ಬೇಡ, ಕಾಂಕ್ರೀಟ್ ರಸ್ತೆ ಮಾಡಿ ಎಂದು ಪುರಸಭೆ ಸದಸ್ಯ ಸುಭಾಸ ಮ್ಯಾಗೇರಿ ತಾಕೀತು ಮಾಡಿದ್ದರು. ಆದರೆ, ನಗರೋತ್ಥಾನ ಕಾಮಗಾರಿಯಲ್ಲಿ ಕಾಂಕ್ರೀಟ್ ರಸ್ತೆಯ ಕ್ರಿಯಾಯೋಜನೆಯಿಲ್ಲ. ಡಾಂಬರ್ ರಸ್ತೆಯೇ ಮಾಡುತ್ತೇವೆ ಎಂದು ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರ ನಡುವೆ ವಾಗ್ವಾದವಾಗಿತ್ತು. ಹೀಗಾಗಿ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.
ಕುಷ್ಟಗಿ ರಸ್ತೆಯಿಂದ ಕೊರವರ ಓಣಿ ಮಾರ್ಗವಾಗಿ ಮೈಸೂರು ಮಠಕ್ಕೆ ತೆರಳುವ ರಸ್ತೆಯಲ್ಲಿ ಶಾಲಾ ಬಸ್‌ಗಳು ಸಂಚರಿಸುವಾಗ ಜಲ್ಲಿಕಲ್ಲುಗಳು ಪಾದಚಾರಿಗಳಿಗೆ ಸಿಡಿಯುತ್ತವೆ. ಮಳೆಗಾಲದಲ್ಲಿ ಕೆಸರು ತುಂಬಿರುತ್ತದೆ. ಮಳೆ ಇಲ್ಲವಾದಲ್ಲಿ ಧೂಳಿನಿಂದ ಕೂಡಿರುತ್ತದೆ. ನಿತ್ಯ ಧೂಳು ಸೇವಿಸಿ ಅನಾರೋಗ್ಯಕ್ಕೀಡಾಗುವ ಭೀತಿ ಎದುರಾಗಿದೆ. ಡಾಂಬರೀಕರಣ ಅಥವಾ ಕಾಂಕ್ರೀಟ್ ರಸ್ತೆಯನ್ನು ಶೀಘ್ರವೇ ನಿರ್ಮಿಸಬೇಕು.I ಮಾರುತಿ ಹಾದಿಮನಿ ನಿವಾಸಿ.ನಗರೋತ್ಥಾನ ಕಾಮಗಾರಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆಯಿಲ್ಲ. ಈಗಾಗಲೇ ಮೇಲಧಿಕಾರಿಗಳಿಂದ ಡಾಂಬರ್ ರಸ್ತೆ ನಿರ್ಮಾಣ ಮಾಡಲು ಆದೇಶ ದೊರಕಿದೆ. ಪಟ್ಟಣದಲ್ಲಿ ನಗರೋತ್ಥಾನ ಕಾಮಗಾರಿಯಲ್ಲಿ ಇನ್ನು 2 ಕಿ.ಮೀ. ರಸ್ತೆ ನಿರ್ಮಾಣ ಮಾಡಬೇಕಿದೆ. ನವೆಂಬರ್ ಕೊನೇ ವಾರ ಅಥವಾ ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.I ಪಿ.ಎನ್. ದೊಡ್ಡಮನಿ ಸಹಾಯಕ ಇಂಜಿನಿಯರ್ ಪುರಸಭೆ ಗಜೇಂದ್ರಗಡ