ಲೋಕೇಶ್‌ಎಂ. ಐಹೊಳೆ ಜಗಳೂರು
ಜನಪ್ರತಿನಿಧಿಗಳು ಪ್ರತಿ ಬಾರಿ ಬಂದಾಗ ನಮಗೆ ಸೂರು ನೀಡುವ ಆಸೆ ತೋರಿಸಿ ವೋಟು ಪಡೆದು ಗೆಲ್ಲುತ್ತಿದ್ದಾರೆ. ಆದರೆ, ಈವರೆಗೂ ತಲೆ ಮೇಲೆ ಸೂರಿರಲಿ..ಯಾವೊಂದು ಸೌಲಭ್ಯವಿಲ್ಲದೆ ಕಾಡುಪ್ರಾಣಿಗಳಂತೆ ಬದುಕುತ್ತಿದ್ದೇವೆ.
ಹೀಗೆ ಅಸಹಾಯಕತೆಯ ಅಳಲು ವ್ಯಕ್ತಪಡಿಸಿದ್ದು ತಾಲೂಕಿನ ಕುಗ್ರಾಮವಾದ ತಾರೇಹಳ್ಳಿಯ ಹೊಸೂರು ಗ್ರಾಮದ ಸೌಲಭ್ಯ ವಂಚಿತ ಗುಡಿಸಲು ವಾಸಿಗಳು.
ಗ್ರಾಮಗಳ ಅಭಿವೃದ್ಧಿಗೆ ಪ್ರತಿ ವಷರ್ ಸರ್ಕಾರ ಕೋಟ್ಯಂತರ ರೂ. ಬಿಡುಗಡೆ ಮಾಡುತ್ತಿದೆ. ಆದರೂ ಗುಡಿಸಲು ಮುಕ್ತ ಗ್ರಾಮಗಳನ್ನಾಗಿ ಮಾಡಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಈ ಕುಗ್ರಾಮವೇ ಸಾಕ್ಷಿ.
ಗ್ರಾಮ ಸುಮಾರು 20 ವರ್ಷಗಳಿಂದ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿ ಪ.ಪಂಗಡ್ಕೆ ಸೇರಿದ 50ಕ್ಕೂ ಹೆಚ್ಚು ಕುಟುಂಬಗಳಿದ್ದು, ಪ್ರತಿಯೊಬ್ಬರು ಗುಡಿಸಲುಗಳಲ್ಲಿಯೇ ಜೀವನ ಕಳೆಯುತ್ತಿದ್ದಾರೆ.
ಇಲ್ಲಿ ಎಲ್ಲವೂ ಇಲ್ಲಗಳದ್ದೇ ದರ್ಬಾರ್ ಆಗಿದೆ. ರಸ್ತೆ, ವಿದ್ಯುತ್ ಸಂಪರ್ಕ, ಸಾರಿಗೆ ಯಾವೊಂದೂ ಇಲ್ಲ. ಇಂದಿಗೂ ಇಲ್ಲಿನ ವಾಸಿಗಳು ಕಾಲ್ನಡಿಗೆಯಲ್ಲಿ ಓಡಾಡುತ್ತಾರೆ. ಮಳೆಗಾಲ ಬಂದರೆ ಇವರ ಜೀವನ ದೇವರಿಗೇ ಪ್ರೀತಿ.
ಜತೆಗೆ, ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯದ ಅಂಚಿನಲ್ಲಿರುವುದರಿಂದ ಕಾಡುಪ್ರಾಣಿಗಳ ಕಾಟ ಹೆಚ್ಚಿದೆ. ಸಂಜೆಯಾಗುತ್ತಲೇ ಮನೆ ಸೇರಿಕೊಳ್ಳಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಪಕ್ಕದ ತಾರೇಹಳ್ಳಿ ಗ್ರಾಮಕ್ಕೆ ಹೋಗಬೇಕು. ಇನ್ನು ವ್ಯಾಪಾರಕ್ಕೆ ಜಗಳೂರು ಪಟ್ಟಣಕ್ಕೆ 16 ಕಿಮೀ ದೂರ ಸಾಗಬೇಕು. ಅನಾರೋಗ್ಯ ಕಾಣಿಸಿಕೊಂಡರೆ ಆಸ್ಪತ್ರೆಗೆ ತೆರಳುವುದಕ್ಕೆ ದುಸ್ಸಾಹಸ ಮಾಡಬೇಕು.
ಆದರೆ, ಜನಪ್ರತಿನಿಧಿಗಳು ಕಳೆದ 2 ದಶಕದಿಂದ ನಿಮಗೆ ಶಾಶ್ವತ ಸೂರು ಒದಗಿಸುತ್ತೇವೆ ಎಂಬ ಆಸೆ ತೋರಿಸಿ ವೋಟು ಪಡೆದಿದ್ದಾರೆ. ಅಧಿಕಾರಿಗಳು ಮನವಿ ನೀಡಿದಾಗ ಸೂರು, ಸೌಲಭ್ಯ ಕಲ್ಪಿಸುವ ಭರವಸೆ ನೀಡಿ ಕಣ್ಮರೆಯಾಗುತ್ತಾರೆ ಎಂದು ಅಲವತ್ತುಕೊಳ್ಳುತ್ತಾರೆ ಇಲ್ಲಿನ ನಿವಾಸಿಗಳು.
ನರೇಗಾ 15ನೇ ಹಣಕಾಸು ಯೋಜನೆ ಸೇರಿದಂತೆ ಪ್ರತಿ ವರ್ಷ ಲಕ್ಷಾಂತರ ರೂ. ಬಂದರೂ ನಮ್ಮ ಗ್ರಾಮಕ್ಕೆ ಉಪಯೋಗವಾಗಿಲ್ಲ. ಇಲ್ಲಿನ ವಾಸ ಮಾಡುವ ಬಡ ಜನರು ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ. ಏನಾದರೂ ಸಮಸ್ಯೆಯಾಗಿ ಸತ್ತಾಗ ಎಲ್ಲರೂ ಬರುತ್ತಾರೆ ಎಂದು ಗ್ರಾಪಂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹೊಸೂರಿನಲ್ಲಿ ಇಪ್ಪತ್ತು ವಷರ್ಗಳಿಂದಲೂ ಮುರುಕಲು ಗುಡಿಸಲಿನಲ್ಲಿದ್ದರೂ ಗ್ರಾಪಂನಿಂದ ಒಂದು ಮನೆ ನೀಡಿಲ್ಲ. ಮಳೆ ಬಂದಾಗ ಎಲ್ಲ ಗುಡಿಸಲು ಸೋರುತ್ತವೆ. ಮನೆಯೊಳಗೆ ನೀರು ಬಂದಾಗ ರಾತ್ರಿಪೂರ್ತಿ ನಿಂತುಕೊಂಡೇ ದಿನ ದೂಡಬೇಕಾಗಿದೆ. ಇನ್ನಾದರೂ ನಮಗೊಂದು ನೆಲೆ ಕಲ್ಪಿಸಿ.
-ಬೊಮ್ಮಣ್ಣ ಗುಡಿಸಲು ಮನೆ ನಿವಾಸಿ
ಇಲ್ಲಿನ ಹೀನಾಯಸ್ಥಿತಿ ಕುರಿತು ಅನೇಕ ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಅಧಿಕಾರಿಗಳು ನಿಮಗೆ ಮನೆ ಬಂದಿಲ್ಲ. ನಿಮಗೆ ಸೂಕ್ತ ದಾಖಲೆಗಳಿಲ್ಲ ಎಂಬ ಸಬೂಬು ಹೇಳಿ ನಮ್ಮ ಬಾಯಿ ಮುಚ್ಚಿಸುತ್ತಾರೆ.
-ಮಲ್ಲಮ್ಮ, ನಿವಾಸಿ ತಾರೇಹಳ್ಳಿ ಹೊಸೂರು.