ಬೀಳಗಿ ತಾಲೂಕಿನ ಅನಗವಾಡಿ ಬಳಿ ಘಟಪ್ರಭಾ ನದಿ ಸೇತುವೆ ಎಂಟ್ರಿಗೆ 360 ಡಿಗ್ರಿ ಆ್ಯಂಗಲ್ ಸೋಲಾರ್ ಸಂಪರ್ಕ ಸಹಿತ ಸಿಸಿಟಿವಿ ಕ್ಯಾಮರಾ ಅಳವಡಿಸುತ್ತಿರುವುದು. 
ಜಿಲ್ಲೆ

ಅಪರಾಧ ತಡೆಗೆ ಸಿದ್ದವಾದ ಮಿಟುಕದ ಕಣ್ಣು

ದತ್ತಾತ್ರೇಯ ಪಿ ಕುಲಕರ್ಣಿ

ಬಾಗಲಕೋಟೆ: ಜಿಲ್ಲೆಯ ಕೃಷ್ಣಾ ನದಿ ವ್ಯಾಪ್ತಿಯ ವಿವಿಧ ಸೇತುವೆಗಳ ಬಳಿ ಶವಗಳ ಪತ್ತೆ ಅಧಿಕವಾಗುತ್ತಿದೆ. ಅಪರಾಧ ಕೃತ್ಯಗಳು ಹೆಚ್ಚೆಚ್ಚು ದಾಖಲಾಗುತ್ತಿವೆ. ಅವುಗಳನ್ನು ನಿಯಂತ್ರಣಕ್ಕೆ ತರಲು ಇದೀಗ ಬಾಗಲಕೋಟೆ ಪೊಲೀಸ್ ಇಲಾಖೆ ಮಿಟುಕದ ಕಣ್ಣಿನ ಮೊರೆ ಹೋಗಿದೆ.

ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣೆ ವ್ಯಾಪ್ತಿ ಹಾಗೂ ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾ ಹಾಗೂ ಮಲಪ್ರಭಾ ನದಿಯ ವಿವಿಧ ಸೇತುವೆಗಳ ಬಳಿ ಸಿಸಿಟಿವಿ ಕ್ಯಾಮರಾ ಅಳವಡಿಸುವ ಮೂಲಕ ಅಪರಾಧ ಕೃತ್ಯಗಳನ್ನು ತಡೆಯಲು ಪೊಲೀಸ್ ಇಲಾಖೆ ಮುಂದಾಗಿದೆ.

ಬೀಳಗಿ ತಾಲೂಕಿನ ಘಟಪ್ರಭಾ ನದಿಯ ಅನಗವಾಡಿ ಸೇತುವೆ, ಬೀಳಗಿ ತಾಲೂಕಿನ ಕೋಲಾರ ಸೇತುವೆ ಹಾಗೂ ಸಾವಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾ ನದಿಯ ಜಂಬಗಿ ಬಿಕೆ ಸೋಲಾರ್ ಸಂಪರ್ಕ ಸಹಿತ 360 ಡಿಗ್ರಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಮೂರು ಸ್ಥಳಗಳಲ್ಲಿ ಎಂಟ್ರಿ ಹಾಗೂ ಎಕ್ಸಿಟ್‌ಗೆ ಒಂದರಂತೆ ಒಟ್ಟು ಆರು ಕ್ಯಾಮರಾ ಹಾಕಲಾಗಿದ್ದು, ಅಲ್ಲಿಂದ ಸಂಬಂಧಿಸಿದ ಪೊಲೀಸ್ ಠಾಣೆಗೆ ಸಂಪರ್ಕ ನೀಡಲಾಗಿದೆ.

ಯಾಕಾಗಿ ಸಿಸಿ ಕ್ಯಾಮರಾ?

ಇತ್ತೀಚಿನ ವರ್ಷಗಳಲ್ಲಿ ಕೃಷ್ಣಾ, ಘಟಪ್ರಭಾ ನದಿಗಳ ವಿವಿಧ ಸೇತುವೆಗಳ ಬಳಿ ಅಪರಿಚಿತ ಶವಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸೇತುವೆ ಬಳಿ ಕೊಲೆ ಮಾಡಿ ನದಿಗೆ ಎಸೆದು ಹೋಗಿರುವ ಪ್ರಕರಣಗಳು ನಡೆದಿವೆ. ಹಾಗೆಯೇ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದು, ವಾಹನ ಅಪಘಾತ ಹೆಚ್ಚಾಗಿ ವರದಿ ಆಗುತ್ತಿವೆ. ರಾತ್ರಿ ವೇಳೆ ನದಿ ವ್ಯಾಪ್ತಿ, ಸೇತುವೆಗಳಲ್ಲಿ ಅಪರಾಧ ಕೃತ್ಯ ಎಸೆಗಿ ಅಲ್ಲಿಂದ ಪಾರಾಗುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು ಇಲಾಖೆ ವತಿಯಿಂದ ಮೊದಲ ಹಂತದಲ್ಲಿ ಮೂರು ಸ್ಥಳಗಳಲ್ಲಿ 6 ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮ ತೆಗೆದುಕೊಂಡಿದ್ದಾರೆ. ಪ್ರತಿ ಕ್ಯಾಮರಾಗೆ 35 ಸಾವಿರ ರೂ. ಖರ್ಚು ಮಾಡಲಾಗಿದೆ. ಇದರಿಂದ ಅಪರಾಧ ಕೃತ್ಯಗಳು, ಸೇತುವೆ ಮಾರ್ಗವಾಗಿ ಬರುವ ಹೋಗುವ ಕಳ್ಳ, ಕಾಕರು, ವಾಹನ ಅಪಘಾತಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯ ಎನ್ನುವ ಕಾರಣಕ್ಕೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ಎಸ್ಪಿ ಅವರು ಹೇಳುತ್ತಾರೆ. ಎರಡು ತಿಂಗಳಲ್ಲಿ ಕೊಲ್ಹಾರ ಸೇತುವೆ ಬಳಿ ಮೂರು ಶವ : ಎರಡು ತಿಂಗಳು ಅವಧಿಯಲ್ಲಿ ಬೀಳಗಿ ತಾಲೂಕಿನ ಕೃಷ್ಣಾ ನದಿ ವ್ಯಾಪ್ತಿಯ ಕೊಲ್ಹಾರ ಸೇತುವೆ ಬಳಿ ಇಬ್ಬರು ಮಹಿಳೆಯರು ಸೇರಿ ಮೂವರ ಶವಗಳು ಪತ್ತೆಯಾಗಿದ್ದವು. ಇದರಲ್ಲಿ ಶಿವಮೊಗ್ಗ ಮೂಲದ ಮಮತಾ ಎನ್ನುವ ಮಹಿಳೆಯನ್ನು ಸೇತುವೆ ಬಳಿ ಕೊಲೆ ಮಾಡಿ ಬಳಿಕ ನದಿಗೆ ಎಸೆಯಲಾಗಿತ್ತು. ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಇನ್ನೊಂದು ಮಹಿಳೆ ಶವದ ಗುರುತಿಸುವ ಕೆಲಸ ನಡೆದಿದೆ. ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಯಾರಾದರೂ ಕಾಣೆ ಆಗಿದ್ದಾರಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಒಬ್ಬ ಪುರುಷನ ಶವ ಸಹ ಪತ್ತೆ ಆಗಿದ್ದು, ಅದು ಕೊಲೆಯೋ ಅಸಹಜ ಸಾವೋ ಎಂದು ತನಿಖೆ ನಡೆದಿದೆ. ಪ್ರತಿ ವರ್ಷವೂ ನದಿ ಸೇತುವೆಗಳ ಬಳಿ ಆಗಾಗ್ಗೆ ಶವಗಳು ಪತ್ತೆ ಆಗುತ್ತಿವೆ. ಕೆಲವು ಪ್ರಕರಣಗಳಲ್ಲಿ ಕೊಲೆ ಮಾಡಿ ಎಸೆದಿರುವುದು ಇದ್ದರೆ ಮತ್ತೆ ಕೆಲವೂ ಮಹಾರಾಷ್ಟ್ರ, ಬೆಳಗಾವಿ ಪ್ರಕರಣಗಳಲ್ಲಿ ನದಿ ನೀರಿನಲ್ಲಿ ಶವಗಳು ಹರಿದು ಬಂದಿರುವ ಸಾಧ್ಯತೆಯೂ ಇರುತ್ತದೆ. ಇದೆಲ್ಲವನ್ನು ಪತ್ತೆ ಮಾಡಲು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಸೋಲಾರ್ ಸಂಪರ್ಕ: ಸಿಸಿಟಿವಿ ಕ್ಯಾಮರಾ ಅಳವಡಿಸಿದರೆ ಅಲ್ಲಿ ವಿದ್ಯುತ್ ಸಂಪರ್ಕ ಬೇಕಾಗುತ್ತದೆ. ಹೀಗಾಗಿ ಸೇತುವೆಗಳ ಬಳಿ ಸೋಲಾರ್ ಅವಲಂಬಿತ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಆರಂಭದಲ್ಲಿ ಮೂರು ಕಡೆ ಅಳವಡಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತೆ ಇಂಥ ಸ್ಥಳಗಳು ಎಲ್ಲೆಲ್ಲಿವೆ, ಅಲ್ಲೆಲ್ಲ ಸಿಸಿಟಿವಿ ಕ್ಯಾಮರಾ ಹಾಕಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಸ್ಪಿ ಅಮರನಾಥ ರೆಡ್ಡಿ ಹೇಳುತ್ತಾರೆ.

ಜಿಲ್ಲೆಯಲ್ಲಿ ಈಗಾಗಲೇ 16 ಕಡೆಗೆ ಚೆಕ್‌ಪೋಸ್ಟ್ ತೆರೆಯಲಾಗಿದೆ. ಅಲ್ಲಿ ಒಬ್ಬ ಎಎಸ್‌ಐ, ಒಬ್ಬ ಪಿಸಿ ಇರುತ್ತಾರೆ. ಹಾಗೆಯೇ ಐದು ಪೆಟ್ರೋಲಿಂಗ್ ವಾಹನಗಳು ಸಂಚರಿಸುತ್ತಿರುತ್ತವೆ. ಇದರ ಜೊತೆಗೆ ಹೆಚ್ಚಾಗಿ ಅಪಘಾತ,ಕೊಲೆ, ಶವಗಳನ್ನು ಎಸೆದು ಹೋಗುವ ನದಿ ಸೇತುವೆಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ವಾಹನ ಅಪಘಾತ ನಿಯಂತ್ರಿಸಲು ಇತ್ತೀಚೆಗೆ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸ್ ನಿಯೋಜನೆ ಮಾಡಿದ ಪರಿಣಾಮ ಎರಡು ತಿಂಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಆಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ 28 ಆಗಿದ್ದ ಅಪಘಾತಗಳು ಈ ವರ್ಷ 24ಕ್ಕೆ ಇಳಿಕೆ ಆಗಿದೆ. ಹಾಗೆಯೇ ಜೂನ್ ತಿಂಗಳು 24 ಅಪಘಾತಗಳು ಸಂಭವಿಸಿದ್ದು, ಈ ವರ್ಷ ಈವರೆಗೆ 13 ಅಪಘಾತಗಳು ನಡೆದಿವೆ. 
-ಅಮರನಾಥ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ