ಹೊಸನಗರ: ಮಾವಿನಕೊಪ್ಪದಲ್ಲಿ ಶುಕ್ರವಶರ ಕಾಲುಜಾರಿ ಬಾವಿಗೆ ಬಿದ್ದ ವೃದ್ಧೆಯನ್ನು ಅಗ್ನಿಶಾಮಕದಳ ಮತ್ತು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮಾವಿನಕೊಪ್ಪದ ಯಶೋದಮ್ಮ (62) ತಮ್ಮ ಮನೆಯ ಹಿಂದಿನ ರಿಂಗ್ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ಮನೆಯಲ್ಲಿ ಸ್ವಲ್ಪ ಹೊತ್ತು ಯಶೋದಮ್ಮ ಕಾಣಿಸದ ಹಿನ್ನೆಲೆಯಲ್ಲಿ ಮನೆಯವರು ಆತಂಕದಿಂದ ಹುಡುಕಿದ್ದಾರೆ. ಬಳಿಕ ಬಾವಿಗೆ ಬಿದ್ದಿರುವುದು ಕಂಡು ಬಂದಿದೆ. ಆಗ ಯಶೋದಮ್ಮ ಬಾವಿಗೆ ಇಳಿಸಿದ್ದ ಪೈಪ್ ಹಿಡಿದು ರಕ್ಷಣೆ ಪಡೆದಿದ್ದರು. ಇದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಾಹಸ ಮೆರೆದು 30 ಅಡಿ ಆಳದ ಬಾವಿಯಿಂದ ಮೇಲಕ್ಕೆತ್ತಿದರು. ಇದಕ್ಕೆ ಸ್ಥಳೀಯರು ಸಾಥ್ ನೀಡಿದರು. ಅಗ್ನಿಶಾಮಕ ದಳದ ಕೆ.ಟಿ.ರಾಜಪ್ಪ, ಎಚ್.ಡಿ.ಸುರೇಶ್, ಕೆ. ರವೀಂದ್ರ, ಶಂಕರೇಗೌಡ ಹಾನಗಳ್ಳಿ, ಬಿ.ಸಿ.ಆಂಜನೇಯ, ಭೀಷ್ಮಾಚಾರ್ ಕಮ್ಮಾರ್, ಮಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.