ಮೈಸೂರು: ಓದಿಗಿಂತ ದೊಡ್ಡ ಸುಖ, ಸಂಪತ್ತು ಬೇರೇನಿಲ್ಲ ಎಂಬ ಸತ್ಯ ಅರಿಯಿರಿ ಎಂದು ಹಿರಿಯ ಸಾಹಿತಿ ಡಾ.ರಾಜಪ್ಪ ದಳವಾಯಿ, ಕಾರಾಗೃಹ ಬಂಧಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕಾರಾಗೃಹ ಇಲಾಖೆ ಹಾಗೂ ನಗರದ ಕೇಂದ್ರ ಕಾರಾಗೃಹದಲ್ಲಿ ನಗರದ ಕೇಂದ್ರ ಕಾರಾಗೃಹದಲ್ಲಿ ಬಂಧಿಗಳಿಗಾಗಿ ಆಯೋಜಿಸಿದ್ದ ಮೂರು ದಿನಗಳ ಸಾಹಿತ್ಯ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.
ಚಿಂತಿಸಿದರೆ ಮುಪ್ಪು ಬಹುಬೇಗ ಆವರಿಸಿ, ಮಾನಸಿಕವಾಗಿ ಕುಗ್ಗಿಸುವ ಮೂಲಕ ಸಾವಿನ ಸಮೀಪ ಕೊಂಡೊಯ್ಯುತ್ತದೆ. ಹಾಗಾಗಿ ಬಂಧಿಗಳಾಗಿದ್ದೇವೆ ಎಂದು ಚಿಂತಿಸದೆ ಉತ್ಸಾಹದಿಂದ ಇರುವುದರ ಜತೆಗೆ ಓದಿಗಿಂತ ದೊಡ್ಡ ಸುಖ, ಸಂಪತ್ತು ಬೇರೇನಿಲ್ಲ ಎಂಬ ಸತ್ಯ ಅರಿಯಿರಿ. ಎಲ್ಲರೂ ಓದಿನಲ್ಲಿ ತೊಡಗಿಸಿಕೊಳ್ಳಿ ಎಂದು ತಿಳಿಸಿದರು.
ದೇವನೂರ ಮಹಾದೇವ ಅವರ ‘ಬಂಡೆಯ ಮೇಲೆ ಚಿಗುರೊಡೆಯಬೇಕು’ ಎಂಬ ಮಾತನ್ನು ಮನಗಾಣಿ. ಶಿಕ್ಷೆಯ ಅವಧಿಯನ್ನು ಲೆಕ್ಕ ಹಾಕದೆ ಸಾಹಿತ್ಯ ಓದಿ, ಹೆಚ್ಚಿನ ಅಧ್ಯಯನ ಕೈಗೊಳ್ಳಿ ಎಂದರು.
ನೀವು ಎಲ್ಲಿದ್ದೀರಿ ಎನ್ನ್ನುವುದು ಮುಖ್ಯವಲ್ಲ. ಹೇಗಿದ್ದೇವೆ ಎನ್ನುವುದು ಮುಖ್ಯ. ಕಾರಾಗೃಹದಲ್ಲಿ ಬಂಧನದಲ್ಲಿರುವವರು ಮುಕ್ತ ಮನಸ್ಸಿನಿಂದ ಇರುತ್ತಾರೆ. ಆದರೆ ಬಂಧನದಲ್ಲಿ ಇರದೆ ಇರುವವರು ಮುಕ್ತರಾಗಿರುವುದಿಲ್ಲ. ಅವರಿಗೂ ನಾನಾ ಬಂಧನಗಳು ಇರುತ್ತವೆ ಎಂದು ಅಭಿಪ್ರಾಯಪಟ್ಟರು.
ನಾನು ಅಪರಾಧಿ ಆಗಬಾರದು ಎಂಬ ವಿವೇಕ ಕೊಟ್ಟಿದ್ದೇ ಶಿಕ್ಷಣ. ಹಾಗಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕಾಗಿ ಜೈಲನ್ನು ಶಿಕ್ಷೆ ಎನ್ನದೆ ಶಿಕ್ಷಣವನ್ನಾಗಿ ಪರಿವರ್ತಿಸಿಕೊಳ್ಳಿ. ಕರ್ನಾಟಕ ಸಾಹಿತ್ಯ ಅಕಾಡೆಮಿಯ 60 ವರ್ಷಗಳ ಇತಿಹಾಸದಲ್ಲಿಯೇ ಜೈಲಿನಲ್ಲಿ ಸಾಹಿತ್ಯ ಕಮ್ಮಟ ಏರ್ಪಡಿಸಿದ್ದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕವಯತ್ರಿ ಡಾ.ಜಹಿದಾ ಮಾತನಾಡಿ, ಮಹಿಳಾ ಕೈದಿಗಳು ತಲೆತಗ್ಗಿಸಿ ಕೂರದೆ ತಲೆಯೆತ್ತಿ ಕುಳಿತುಕೊಳ್ಳಿ. ಇದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಜತೆಗೆ ಸಾಹಿತ್ಯದ ವಿವಿಧ ಪ್ರಕಾರದ ಕೃತಿಗಳನ್ನು ಓದಿರಿ ಎಂದರು.
ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಡಾ.ಚಂದ್ರಕಿರಣ್ ಕುಳವಾಡಿ ಮಾತನಾಡಿ, ಮೈಸೂರಿನ ಜೈಲಿನಲ್ಲಿ ಶಿಸ್ತು, ಸ್ವಚ್ಛತೆ ಇದೆ. ವಿಶ್ವವಿದ್ಯಾಲಯದಲ್ಲಿ 31 ವರ್ಷಗಳವರೆಗೆ ಪಾಠ ಮಾಡಿದ್ದಕ್ಕಿಂತ ಮೂರು ದಿನಗಳ ಕಮ್ಮಟದಲ್ಲಿ ಮಾತನಾಡಿದ್ದು ಹೆಚ್ಚು ಆತ್ಮತೃಪ್ತಿ ನೀಡಿದೆ ಎನಿಸಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ್ ಮಾತನಾಡಿ, ಬಂಧಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಕಮ್ಮಟವು ವಿನೂತನವಾಗಿದ್ದು, ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತೊಮ್ಮೆ ಅಪರಾಧ ಮಾಡಲ್ಲ, ಮತ್ತೊಮ್ಮೆ ಜೈಲಿಗೆ ಹೋಗಲ್ಲ, ತಿಳಿದೋ ತಿಳಿಯದೋ ತಪ್ಪು ಮಾಡಲ್ಲ ಎನ್ನುವ ದೃಢಸಂಕಲ್ಪ ಮಾಡಬೇಕು. ಇದಕ್ಕೆ ನೆರವಾಗುವ ಸಾಹಿತ್ಯ ಅಧ್ಯಯನ ಕೈಗೊಳ್ಳಿ. ಈ ಕಮ್ಮಟವು ಧನಾತ್ಮಕ ಶಕ್ತಿ ನೀಡಲಿ ಎಂದು ಆಶಿಸಿದರು.
ಸಹಾಯಕ ಅಧೀಕ್ಷಕರಾದ ಮೋಹನಕುಮಾರ್, ಎಂ.ದೀಪಾ, ಜೈಲರ್‌ಗಳಾದ ಧರಣೇಶ್, ರೂಪವಾಣಿ, ಸಹಾಯಕ ಜೈಲರ್ ಶಿವಕುಮಾರ್, ಶಿಕ್ಷಕ ಪ್ರೇಮಕುಮಾರ್, ಜೈಲಿನ ವೀಕ್ಷಕ ಗುರುರಾಜ ಮರೋಲಿ ಇತರರಿದ್ದರು.