ಜಿಲ್ಲೆ

ರೈತರ ಜೀವನದಿ ಕುಮದ್ವತಿಗೆ ಬಾಗಿನ ಅರ್ಪಣೆ

ರಟ್ಟಿಹಳ್ಳಿ: ತಾಲೂಕಿನಲ್ಲಿ ಮೈದುಂಬಿ ಹರಿಯುತ್ತಿರುವ ಕುಮದ್ವತಿ ನದಿಯು ಈ ಭಾಗದ ರೈತರ ಜೀವನದಿಯಾಗಿದೆ. ವಿವಿಧ ನೀರಾವರಿ ಯೋಜನೆಗಳಿಗೆ ಕುಮದ್ವತಿ ಅನುಕೂಲಕರವಾಗಿದ್ದು, ರೈತರಿಗೆ ಒಂದು ದೊಡ್ಡಶಕ್ತಿಯಾಗಿದೆ ಎಂದು ಶ್ರೀ ಮಹಾಂತದೇವರು ಸ್ವಾಮೀಜಿ ಹೇಳಿದರು.

ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಶ್ರೀ ಮೂಕಪ್ಪ ಶಿವಯೋಗಿಗಳ ಮಠದ ವತಿಯಿಂದ ಶುಕ್ರವಾರ ಕುಮದ್ವತಿ ನದಿಗೆ ಬಾಗಿನ ಅರ್ಪಣೆಗೈದು ಅವರು ಮಾತನಾಡಿದರು. ಕುಮದ್ವತಿ ನೀರಿನಿಂದ ಸಾವಿರಾರು ಬೋರವೆಲ್​ಗಳ ಅಂತರ್ಜಲ ವೃದ್ಧಿಯಾಯಾಗಿದೆ. ಈ ವರ್ಷ ಉತ್ತಮ ಮಳೆಯಾಗಿದ್ದರಿಮದ ನದಿ ಮೈದುಂಬಿ ಹರಿಯುತ್ತಿರುವುದು ರೈತರಲ್ಲಿ ಸಂತಸ ಮೂಡಿದೆ ಎಂದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಪ್ರತಿ ವರ್ಷದಂತೆ ಶ್ರೀ ಮೂಕಪ್ಪ ಶಿವಯೋಗಿಗಳ ಮಠದ ವತಿಯಿಂದ ಕುಮದ್ವತಿ ನದಿಗೆ ಬಾಗಿನ ಅರ್ಪಣೆ ಮಾಡುವುದು ಪದ್ದತಿಯಾಗಿದೆ. ಈ ನದಿಗೆ ಈಗಾಗಲೇ 4 ಭಾಗಗಳಲ್ಲಿ ಬಾಂದರಗಳನ್ನು ನಿರ್ಮಾಣ ಮಾಡಿರುವುದರಿಂದ ರೈತರಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು.

ಶ್ರೀ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಪ್ರಕಾಶ ಜೋಗಿಹಳ್ಳಿ, ಗಿರೀಶ ಪಾಟೀಲ, ಸಿದ್ದಯ್ಯ ವಿರಕ್ತಮಠ, ಕೇಸರಿ ಘಟಕದ ಮಹಿಳೆಯರು ಉಪಸ್ಥಿತರಿದ್ದರು.