ಸಂಗಮನಾಥನ ದರ್ಶನ ಪಡೆಯಲು ದೇವಾಲಯದ ಮುಂದೆ ಸರದಿಯ ಸಾಲಿನಲ್ಲಿ ನಿಂತ ಭಕ್ತರು. 
ಜಿಲ್ಲೆ

ಕೂಡಲಸಂಗಮಕ್ಕೆ ಹರಿದು ಬಂದ ಭಕ್ತ ಸಾಗರ...!

ಕೂಡಲಸಂಗಮ: ಶ್ರಾವಣದ ಕೊನೇ ಸೋಮವಾರ ನಾಡಿನ ವಿವಿಧ ಭಾಗಗಳಿಂದ ಅಪಾರ ಭಕ್ತರು ಸುಕ್ಷೇತ್ರ ಕೂಡಲಸಂಗಮಕ್ಕೆ ಆಗಮಿಸಿ ಕೃಷ್ಣಾ, ಮಲಪ್ರಭಾ ನದಿಯ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಕ್ಷೇತ್ರಾಧಿಪತಿ ಸಂಗಮನಾಥ, ಬಸವಣ್ಣನ ಐಕ್ಯ ಮಂಟಪ ದರ್ಶನ ಪಡೆದು ಶ್ರಾವಣದ ಕೊನೆಯ ಸೋಮವಾರ ಆಚರಿಸಿದರು.

ಭಾನುವಾರ ರಾತ್ರಿಯೇ ಕೆಲವು ಭಕ್ತರು ಸುಕ್ಷೇತ್ರಕ್ಕೆ ಆಗಮಿಸಿದ್ದರು. ಇನ್ನೂ ಕೆಲವು ಭಕ್ತರು ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೆ ತುಂತುರು ಮಳೆಯಲ್ಲಿಯೇ ಸುಕ್ಷೇತ್ರಕ್ಕೆ ಆಗಮಿಸಿ ಸಂಗಮನಾಥನ ದರ್ಶನ ಪಡೆದರು. ಭಕ್ತರು ಮಳೆಯಲ್ಲಿಯೇ ಒಂದು ಗಂಟೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವ ದೃಶ್ಯ ಬೆಳಗ್ಗೆಯಿಂದ ಸಂಜೆಯವರೆಗೆ ಕಂಡು ಬಂತು.

ತುಂತುರು ಮಳೆ ಬೆಳಗ್ಗೆಯಿಂದಲೇ ಆರಂಭವಾಗಿದ್ದರಿಂದ ದೇವಾಲಯ ಕಾರ್ಯಾಲಯ ಮುಂದೆ, ನದಿಯ ದಡದ ಕಮಾನುಗಳಲ್ಲಿ ಭಕ್ತರು ಕುಳಿತು ಸಿಹಿ ಊಟ ಸವಿದರು. ಶುಕ್ರವಾರ ಸ್ವಾತಂತ್ರೃ ದಿನಾಚರಣೆ, ಶನಿವಾರ ಸಾಂದರ್ಭಿಕ ರಜೆ, ಭಾನುವಾರ ಸರ್ಕಾರಿ ರಜೆ, ಶ್ರಾವಣದ ಕೊನೆಯ ಸೋಮವಾರ ಬಹುತೇಕ ಕಡೆ ಸ್ಥಾನಿಕ ರಜೆ. 4 ರಜೆಗಳು ನಿರಂತರವಾಗಿ ಬಂದಿದ್ದರಿಂದ ಅಧಿಕ ಭಕ್ತರು ಕಳೆದು ನಾಲ್ಕು ದಿನಗಳಿಂದ ಸುಕ್ಷೇತ್ರಕ್ಕೆ ಆಗಮಿಸಿ ದರ್ಶನ ಪಡೆದರು.

ಶ್ರಾವಣದ ಕೊನೇ ಸೋಮವಾರ ಅಂದಾಜು 30 ಸಾವಿರಕ್ಕೂ ಅಧಿಕ ಭಕ್ತರು ದರ್ಶನ ಪಡೆದರು ಎಂದು ಅರ್ಚಕ ಕರಸಂಗಯ್ಯ ಗುಡಿ ಹೇಳಿದರು. ನಿರಂತರ ನಾಲ್ಕು ದಿನ ರಜೆಯಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಸಂಗಮನಾಥನಿಗೆ 214 ಆನ್‌ಲೈನ್ ರುದ್ರಾಭಿಷೇಕ, 1104 ರುದ್ರಾಭಿಷೇಕ, 580 ಪಂಚಾಮೃತ ಅಭಿಷೇಕ ಮಾಡಿಸಿದರು. 24 ಜವಳದ ಕಾರ್ಯ, 13 ಕುಟುಂಬ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.