ಕಡೂರು: ಸಂಸದ ಪ್ರಜ್ವಲ್ ರೇವಣ್ಣ ಕಡೂರು ತಾಲೂಕಿಗೆ ನೀಡಿರುವ ಕೊಡುಗೆ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹೊಗರೇಹಳ್ಳಿ ಶಶಿ ಹೇಳಿದರು.
ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮತ್ತು ಸಂಸದರ ನಿಧಿಯಿಂದ ಎಷ್ಟು ಅನುದಾನ ನೀಡಿದ್ದಾರೆ ಎಂಬುದನ್ನು ದಾಖಲೆ ಸಮೇತ ತಾಲೂಕು ಜೆಡಿಎಸ್ ಅಧ್ಯಕ್ಷರು ತಿಳಿಸಲಿ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಪಿಎಂಜಿಎಸ್‌ವೈ (ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ) ಕೂಡ ಸಂಸದರ ವಿಶೇಷ ಶ್ರಮವಿಲ್ಲದಿದ್ದರೂ ದೇಶದಾದ್ಯಂತ ಅನುಷ್ಠಾನಗೊಳ್ಳುತ್ತಿದೆ. ಇದನ್ನೇ ನನ್ನ ಸಾಧನೆ ಎಂದು ಅವರು ಬೆನ್ನು ತಟ್ಟಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣ ಕೆಡಿಪಿ ಸಭೆಗಳನ್ನು ನಡೆಸದೆ ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ. ಕರೊನಾ ಸಂದರ್ಭದಲ್ಲಿ ಎಷ್ಟು ಜನ ಸೋಂಕಿತರ ಆರೈಕೆಯಲ್ಲಿ ಕಾಳಜಿ ವಹಿಸಿದ್ದಾರೆ ಎಂಬುದನ್ನು ತಿಳಿಸಲಿ. ಕೇವಲ ಬಿಜೆಪಿ ಮತಗಳಿಗೆ ಅವಲಂಬಿತರಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಕಳೆದ ಬಾರಿ ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದಲೇ ಪ್ರಜ್ವಲ್ ರೇವಣ್ಣ 60 ಸಾವಿರ ಮತ ಗಳಿಸಿದ್ದರು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರಿಗೆ 30 ಸಾವಿರ ಮತಗಳು ಮಾತ್ರ ದೊರೆತಿತ್ತು. ಈಗ ತಾಲೂಕಿನಲ್ಲಿ ಜೆಡಿಎಸ್ ಪ್ರಭಾವ ಕಡಿಮೆಯಾಗಿದೆ ಎಂದರು.