ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮತದಾನ ಜಾಗೃತಿ ಮೂಡಿಸುವ ವಾಹನ ಸಂಚಾರಕ್ಕೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಗುರುವಾರ ಚಾಲನೆ ನೀಡಿದರು. ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಹಾಯಕ ಆಯುಕ್ತ ಎಸ್.ಎಸ್.ಸಂಪಗಾವಿ, ನಗರಾಭಿವೃದ್ಧಿ ಪ್ರಾಕಾರದ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣನವರ್, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಇದ್ದರು. 
ಜಿಲ್ಲೆ

ಮತದಾನ ಜಾಗೃತಿಗೆ ವಿನೂತನ ಪ್ರಯತ್ನ

ರಾಚಯ್ಯ ಸ್ವಾಮಿ

ರಾಯಚೂರು: ಕಳೆದ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವ ಗ್ರಾಮಗಳಲ್ಲಿ ಮತದಾನ ಮತ್ತು ಮತದಾನ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ಪೀಪ್ ಸಮಿತಿಯಿಂದ ವಿನೂತನ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.
ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ಪೀಪ್ ಸ್ತಬ್ದಚಿತ್ರ ವಾಹನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ವಾಹನದ ಮೂಲಕ ಮತದಾರರಲ್ಲಿ ಮತದಾನದ ಮಹತ್ವ ಮತ್ತು ಅರಿವು ಮೂಡಿಸುವ ಕಾರ್ಯ ಮಾಡಲಾಗುವುದು ಎಂದರು.
ವಾಹನದಲ್ಲಿ ಇವಿಎಂ ಯಂತ್ರದ ಕಂಟ್ರೋಲ್ ಯೂನಿಟ್, ವಿವಿ ಪ್ಯಾಟ್ ಹಾಗೂ ಬ್ಯಾಲೆಟ್ ಯೂನಿಟ್‌ನ ಸ್ತಬ್ದ ಚಿತ್ರವಿದ್ದು, ಬ್ಯಾಲೆಟ್ ಯೂನಿಟ್‌ನಲ್ಲಿರುವ ಗುಂಡಿಯನ್ನು ಒತ್ತಿದಾಗ ಕಂಟ್ರೋಲ್ ಯೂನಿಟ್‌ನಲ್ಲಿ ಮತದಾನ ಪೂರ್ಣವಾದಂತೆ ಶಬ್ದವಾಗುತ್ತಿದೆ. ಮೇ 7ರಂದು ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು.
ವಾಹನ ಏ.4ರಿಂದ 7ರವರೆಗೆ ರಾಯಚೂರು ನಗರದಲ್ಲಿ, ಏ.8 ರಿಂದ 1ರವರೆಗೆ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ, ಏ.12ರಿಂದ 15ರವರೆಗೆ ದೇವದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ಏ.16 ರಿಂದ 19ರವರೆಗೆ ಲಿಂಗಸುಗೂರು ಕ್ಷೇತ್ರದಲ್ಲಿ ಏ.20 ರಿಂದ 23ರವರೆಗೆ ಸಿಂಧನೂರು ಕ್ಷೇತ್ರದಲ್ಲಿ ಏ.24 ರಿಂದ 27ರವರೆಗೆ ಮಸ್ಕಿ ಕ್ಷೇತ್ರದಲ್ಲಿ, ಏ.38 ರಿಂದ ಮೇ 1ರವರೆಗೆ ಮಾನ್ವಿ ಕ್ಷೇತ್ರದಲ್ಲಿ ವಾಹನ ಸಂಚರಿಸಲಿದೆ ಎಂದು ಚಂದ್ರಶೇಖರ ನಾಯಕ ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಹಾಯಕ ಆಯುಕ್ತ ಎಸ್.ಎಸ್.ಸಂಪಗಾವಿ, ನಗರಾಭಿವೃದ್ಧಿ ಪ್ರಾಕಾರದ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣನವರ್, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಜಿಲ್ಲಾ ಸ್ವೀಪ್ ಸಮಿತಿ ನೋಡೆಲ್ ಅಕಾರಿ ಡಾ.ಬಿ.ವೈ.ವಾಲ್ಮೀಕಿ ಉಪಸ್ಥಿತರಿದ್ದರು.