ಕಿಕ್ಕೇರಿ: ಇಲ್ಲಿನ ಇತಿಹಾಸ ಪ್ರಸಿದ್ಧ ಹೊಯ್ಸಳರ ಕಾಲದ ಬ್ರಹ್ಮೇಶ್ವರ ದೇಗುಲದಲ್ಲಿ ಆಳೆತ್ತರಕ್ಕೆ ಬೆಳೆದಿದ್ದ ಗಿಡಗಂಟಿಯನ್ನು ಅಧಿಕಾರಿಗಳು, ಪೌರಕಾರ್ಮಿಕರು ಶ್ರಮದಾನದ ಮೂಲಕ ತೆರವುಗೊಳಿಸಿ ದೇಗುಲವನ್ನು ಸ್ವಚ್ಛಗೊಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ತಾಲೂಕು ಪಂಚಾಯಿತಿ, ಕಿಕ್ಕೇರಿ ಗ್ರಾಮ ಪಂಚಾಯಿತಿ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛ ಶನಿವಾರ ಆಚರಣೆ ಕಾರ್ಯಕ್ರಮದಲ್ಲಿ ದೇಗುಲದ ಆವರಣ ಸ್ವಚ್ಛಗೊಳಿಸಲಾಯಿತು.
ಪೌರಕಾರ್ಮಿಕರು, ಅಧಿಕಾರಿಗಳು ಕೈಯಲ್ಲಿ ಕುಡುಗೋಲು, ಹಾರೆ, ಪಿಕಾಸಿ, ಗುದ್ದಲಿ, ಪೊರಕೆ, ಬಾಂಡಲಿಗಳನ್ನು ಹಿಡಿದು ಕಲ್ಲು, ಮುಳ್ಳು ಬಾಚಿ ಗುಂಡಿ ಬಿದ್ದ ಸ್ಥಳವನ್ನು ಸಮತಟ್ಟು ಮಾಡಿದರು. ಕಲ್ಲು, ಮುಳ್ಳಿನ ಪೊದೆಗಳಿಂದ ತುಂಬಿದ ಆವರಣವನ್ನು ಸುಂದರ ಗೊಳಿಸಿ ಕಲ್ಯಾಣಿಯಲ್ಲಿನ ನೀರಿನಿಂದ ತೊಳೆದು ಶುಚಿಗೊಳಿಸಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ ಮಾತನಾಡಿ, ಗಾಂಧಿ ಪರಿಕಲ್ಪನೆಯಂತೆ ಎಲ್ಲಿ ಶುಚಿತ್ವ ಇರಲಿದೆ ಅಲ್ಲಿ ಆರೋಗ್ಯ ಎಂಬ ದೇವರು ಇರಲಿದ್ದಾನೆ. ಅಶುಚಿತ್ವ ಸಾಂಕ್ರಾಮಿಕ ರೋಗ, ಅನಾರೋಗ್ಯದ ತಾಣವಾಗಲಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಶುಚಿತ್ವದೆಡೆಗೆ ಗಮನ ಹರಿಸಿದರೆ ಗ್ರಾಮ ಆರೋಗ್ಯ ಧಾಮವಾಗಲಿದೆ. ನಾಗರಿಕರು ನೈರ್ಮಲ್ಯತೆಗೆ ಸಹಕರಿಸಲು ಜಾಗೃತಿ ಮೂಡಿಸಲು ಅಧಿಕಾರಿಗಳು, ಸಿಬ್ಬಂದಿ ಮುಂದಾಗಬೇಕು ಎಂದು ತಿಳಿಸಿದರು.
ವಾರದ ಒಂದು ದಿನ ಸ್ವಚ್ಛ ದಿನಾಚರಣೆ ಮಾಡುವುದರಿಂದ ಇಡೀ ಗ್ರಾಮ ನೈರ್ಮಲ್ಯತೆಯ ಬೀಡಾಗಲಿದೆ. ವಾರಕ್ಕೊಂದು ಬಡಾವಣೆ ಆಯ್ಕೆ ಮಾಡಿಕೊಂಡು ಸ್ಥಳೀಯ ಮುಖಂಡರು, ಸಂಘ-ಸಂಸ್ಥೆಗಳ ಸಹಕಾರದಿಂದ ಸ್ವಚ್ಛ ಅಭಿಯಾನಕ್ಕೆ ಕೈಜೋಡಿಸಬೇಕು ಎಂದರು.
ಪಿಡಿಒ ಸಿ. ಚಲುವರಾಜು, ಕಾರ್ಯದರ್ಶಿ ಪಾಪೇಗೌಡ, ಲೆಕ್ಕ ಸಹಾಯಕ ವಾಸು, ಪೌರಕಾರ್ಮಿಕರು ಇದ್ದರು.