ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆಯಲ್ಲಿ ಕುಲಾಧಿಪತಿ ಬಸನಗೌಡ ಎಂ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ಸಮಕುಲಾಧಿಪತಿ ಡಾ.ವೈ.ಎಂ. ಜಯರಾಜ, ಡಾ.ಅರುಣ ಇನಾಮದಾರ, ಕುಲಸಚಿವ ಡಾ.ಆರ್.ವಿ. ಕುಲಕರ್ಣಿ ಇದ್ದಾರೆ.  
ಜಿಲ್ಲೆ

ಬಿಎಲ್‌ಡಿಇ ಸಂಸ್ಥೆಯಿಂದ ಮಹತ್ವದ ನಿರ್ಧಾರ, ಬರಲಿದೆ ಮತ್ತೊಂದು ಇಂಜಿನಿಯರಿಂಗ್ ಕಾಲೇಜ್ !

Vijyapura - Parsuram Bhasagi

ವಿಜಯಪುರ: ಪ್ರತಿಷ್ಟಿತ ಬಿಎಲ್‌ಡಿಇ ಸಂಸ್ಥೆಯ ನೂತನ ಕ್ಯಾಂಪಸ್‌ನಲ್ಲಿ ಹೊಸದೊಂದು ಇಂಜಿನಿಯರಿಂಗ್ ಕಾಲೇಜ್ ಸ್ಥಾಪಿಸಲು ಉದ್ದೇಶಿಸಿರುವುದಾಗಿ ಬಿಎಲ್‌ಡಿಇ ಡೀಮ್ಡ್ ವಿವಿ ಕುಲಾಧಿಪತಿ ಬಸನಗೌಡ ಎಂ. ಪಾಟೀಲ ತಿಳಿಸಿದರು.

ಈಗಾಗಲೇ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಅಲೈಡ್ ಹೆಲ್ತ್ ಸೈನ್ಸ್ ಕಾಲೇಜ್, ಫಿಸಿಯೊಥೆರಪಿ ಕಾಲೇಜ್, ಅಪ್ಲೈಡ್ ಸೈನ್ಸ್ ಮತ್ತು ಟೆಕ್ನಾಲಜಿ ಕಾಲೇಜ್, ಕಾನೂನು ಮಹಾವಿದ್ಯಾಲಯ ಸೇರಿದಂತೆ 5 ಮಹಾವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ 2026-27 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಇಂಜಿನಿಯರಿಂಗ್ ಕಾಲೇಜ್ ಆರಂಭಗೊಳ್ಳಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ನೂತನ ಕಾಲೇಜ್‌ನಲ್ಲಿ ಕಂಪ್ಯೂಟರ್ ಸೈನ್ಸ್, ಡಾಟಾ ಸೈನ್ಸ್, ಎಐಎಂ, ಇನ್‌ಫಾರಮೇಶನ್ ಸೈನ್ಸ್ ಆ್ಯಂಡ್ ಇಲೆಕ್ಟಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಸೇರಿದಂತೆ ವಿವಿಧ ಪದವಿ ವಿಭಾಗಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.

ಅರಕೇರಿ ಗ್ರಾಮದ ಬಳಿ 50 ಎಕರೆ ಪ್ರದೇಶದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ಈಗ ಸರ್ಕಾರ ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡಲು ಉದ್ದೇಶಿಸಿದೆ. ಹೀಗಾಗಿ ರೈತರು ಮತ್ತು ಕೃಷಿಯನ್ನು ಪ್ರೋತ್ಸಾಹಿಸಲು ಮುಂದಿನ ಶೈಕ್ಷಣಿಕ ವರ್ಷದಿಂದ ಖಾಸಗಿ ಕೃಷಿ ಮಹಾವಿದ್ಯಾಲಯ ಆರಂಭಿಸಲಾಗುವುದು ಎಂದರು.

ಅಲ್ಲದೆ, ಸೆಂಟರ್ ಆಫ್ ಎಕ್ಸ್ಲೆನ್ಸ್ ಇನ್ ಡೈರಿ ಫಾರ್ಮಿಂಗ್ ಪ್ರಾರಂಭಿಸಲಾಗುತ್ತಿದೆ. ಇದರಲ್ಲಿ ಕೇವಲ 50 ರೈತರನ್ನು ಆಯ್ಕೆ ಮಾಡಿಕೊಂಡಿದ್ದು, ರೈತರಿಗೆ ಆದಾಯ ದ್ವಿಗುಣಗೊಳಿಸುವ ಹಾಗೂ ಪೌಷ್ಟಿಕ ಹಾಲು, ಹಾಲಿನ ಉತ್ಪನ್ನಗಳನ್ನು ಪೂರೈಕೆ ಮಾಡುವ ಉದೇಶದಿಂದ ಡೈರಿ ಫಾರ್ಮಿಂಗ್‌ನ್ನು ಅತೀ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುತ್ತಿದೆ ಎಂದರು.

ಬಿಎಲ್‌ಡಿಇ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕ್ಯಾಂಪಸ್ ಆರಂಭಿಸಲಾಗುತ್ತಿದೆ. ಇಂಜಿನಿಯರಿಂಗ್ ಕಂಪ್ಯೂಟರ್ ಅಪ್ಲಿಕೇಷನ್, ಬಿಜಿನೆಸ್ ಅಡಮಿನಿಸ್ಟ್ರೇಷನ್, ಫಾರ್ಮಸಿ, ಕಾನೂನು, ಆರ್ಕಿಟೆಕ್ಚರ್ ಆ್ಯಂಡ್ ಅಪ್ಲೈಬಡ್ ಸೈನ್ಸ್ ಸೇರಿದಂತೆ 8 ಕ್ಕೂ ಹೆಚ್ಚು ಕಾಲೇಜುಗಳನ್ನು ಪ್ರಾರಂಭಿಸಲಿದೆ. ಅದೇ ಕ್ಯಾಂಪಸ್‌ನಲ್ಲಿ ಅಂತಾರಾಷ್ಟ್ರೀಯ ಶಾಲೆಯನ್ನು ಪ್ರಾರಂಭಿಸಲಾಗುವುದು ಎಂದರು.

ಬರುವ ದಿನಗಳಲ್ಲಿ ಬಿಎಲ್‌ಡಿಇ ವಿಶ್ವವಿದ್ಯಾಲಯವು ಯಾದಗಿರಿ, ರಾಯಚೂರ, ಕೊಪ್ಪಳ ಹಾಗೂ ವಿಜಯನಗರ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನರ್ಸಿಂಗ್, ಫಾರ್ಮಸಿ, ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜುಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದರು.

ಸಮಕುಲಾಧಿಪತಿ ಡಾ.ವೈ.ಎಂ. ಜಯರಾಜ, ಡಾ.ಅರುಣ ಇನಾಮದಾರ, ಕುಲಸಚಿವ ಡಾ.ಆರ್.ವಿ. ಕುಲಕರ್ಣಿ ಇದ್ದರು.