ಜಿಲ್ಲೆ

ಕಣ್ಣಿನ ಸಮಸ್ಯೆ ಪರಿಹಾರಕ್ಕೆ ತಪಾಸಣೆ ಅಗತ್ಯ

ಮರಿದೇವ ಹೂಗಾರ

ಹುಬ್ಬಳ್ಳಿ: ಕಣ್ಣುಗಳು ದೇಹಕ್ಕೆ ಮುಖ್ಯವಾದ ಅಂಗ. ಕಣ್ಣು ಇಲ್ಲದಿದ್ದರೆ ಜಗತ್ತು ನೋಡಲು ಸಾಧ್ಯವಿಲ್ಲ. ಏನಾದರೂ ಸಮಸ್ಯೆ ಕಂಡು ಬಂದರೆ ಶೀಘ್ರವೇ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಸಮಸ್ಯೆ ಮಿದುಗಳಿಗೂ ಹೋಗಬಹುದು ಎಂದು ವಿವೇಕಾನಂದ ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥೆ ಡಾ. ಮಂಜುಳಾ ಹುಗ್ಗಿ ಅಭಿಪ್ರಾಯಪಟ್ಟರು.
ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ, ಯುನೈಟೆಡ್ ಸೆಕ್ಯೂರಿಟಿ ಫೋರ್ಸ್, ಕಿತ್ತೂರ ರಾಣಿ ಚನ್ನಮ್ಮ ಸೆಕ್ಯೂರಿಟಿ ಸರ್ವಿಸ್ ಪ್ರೈ.ಲಿ. ಹಾಗೂ ವಿವೇಕಾನಂದ ಆಸ್ಪತ್ರೆ ವತಿಯಿಂದ ಇಲ್ಲಿಯ ನೇಕಾರ ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಕಾರಣಕ್ಕೂ ಕಣ್ಣುಗಳ ಬಗ್ಗೆ ತಾತ್ಸಾರ ಬೇಡ. ಚಿಕ್ಕ ಸಮಸ್ಯೆ ಕಂಡು ಬಂದಾಗಲೇ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎಂದು ಸಲಹೆ ನೀಡಿದರು.
ವಿವೇಕಾನಂದ ಆಸ್ಪತ್ರೆ ಸಿಇಒ ಡಾ. ರಾಹುಲ್ ಮಾತನಾಡಿ, ಮನುಷ್ಯನಿಗೆ ಜ್ಞಾನ ಅತ್ಯಗತ್ಯ. ಓದಿ ಅಂಕ ಪಡೆದರೆ ಸಾಲದು, ಇದರ ಜತೆಗೆ ವಿಭಿನ್ನವಾದ ಜ್ಞಾನ ಅತ್ಯಗತ್ಯ. ಬರೀ ಮೊಬೈಲ್ ಫೋನ್‌ನಲ್ಲಿಯೇ ಕಾಲ ಕಳೆಯಬೇಡಿ. ಫೋನ್ ಬಳಕೆಯಿಂದ ನರರೋಗದ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಇಂದಿನ ವಿದ್ಯಾರ್ಥಿಗಳು, ದೇಶದ ಭವಿಷ್ಯ. ಮನೆಯ ಊಟವನ್ನೇ ಮಾಡಬೇಕು ಎಂದು ತಿಳಿವಳಿಕೆ ನೀಡಿದರು.
ಮುಖ್ಯಗುರು ಎಸ್.ವೈ. ವಿಭೂತಿ ಮಾತನಾಡಿ, ತಂದೆ-ತಾಯಿ ನಂತರದ ಸ್ಥಾನ ವೈದ್ಯರದು. ಸಂತೋಷ ಇಂಚಲ ಅವರು ನಮ್ಮ ಶಾಲೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ತಾವು ಅಧ್ಯಯನ ಮಾಡಿ ಶಾಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ವಿಜಯವಾಣಿ ಪತ್ರಿಕೆಯ ಪ್ರಸಾರಾಂಗ ವಿಭಾಗದ ವ್ಯವಸ್ಥಾಪಕ ಅಯ್ಯಣ್ಣ ಮಾತನಾಡಿ, ವಿದ್ಯಾರ್ಥಿ ಮಿತ್ರವನ್ನು ನಿತ್ಯವೂ ಓದಿ ಜ್ಞಾನಾರ್ಜನೆ ಪಡೆಯಬೇಕು. ನಿಮಗಾಗಿ ಸಂತೋಷ ಇಂಚಲ ಅವರು ಉಚಿತವಾಗಿ ಪತ್ರಿಕೆಯನ್ನು ಕೊಡಿಸುತ್ತಿದ್ದಾರೆ. ಯಾರಿಗೂ ಕೊಡುವ ಗುಣ ಬರುವುದಿಲ್ಲ. ಅವರಲ್ಲಿರುವ ಸೇವಾ ಮನೋಭಾವನೆ ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದರು. 8,9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ನೇತ್ರವನ್ನು ತಪಾಸಣೆ ಮಾಡಲಾಯಿತು.
ಯುನಿಟಿ ಸೆಕ್ಯೂರಿಟಿ ಫೋರ್ಸ್‌ನ ನಿರ್ದೇಶಕರಾದ ರೇಣುಕಾ ಇಂಚಲ, ಪುಷ್ಪಾ ಉಣಕಲ್, ಡಾ. ಲಕ್ಷ್ಮೀ ಗುಮಾಸ್ತೆ, ಎಸ್‌ಡಿಎಂಸಿ ಅಧ್ಯಕ್ಷ ಕೇಶವಮೂರ್ತಿ ಪಳವಳ್ಳಿ, ಗೀತಾ ದೇಶನೂರ, ಲೀಲಾವತಿ ಪಾಟೀಲ, ಕಮಲಾ ಉಣಕಲ್, ಮಹೇಶ ಹಾಸಲಕರ, ಲಕ್ಷ್ಮೀ ಮಧುರ, ಫಕೀರಪ್ಪ ಹುಲಗೂರ, ನಸ್ರೀನ್ ಹೆಬ್ಬಳ್ಳಿ, ಇತರರು ಇದ್ದರು. ಶಿಕ್ಷಕ ಮಂಜುನಾಥ ಹೂಗಾರ ನಿರ್ವಹಿಸಿದರು.