ಜಿಲ್ಲೆ

ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ನಿವಾಸದಲ್ಲಿ ಆವರಿಸಿದ ನೀರವ ಮೌನ : ಅಂತಿಮ ದರ್ಶನಕ್ಕೆ ಸಿದ್ದತೆ

ಮಂಜುನಾಥ.ಕೆ

ಬೆಂಗಳೂರು: ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಉಗ್ರರು ಹಾಗೂ ಯೋಧರ ನಡುವೆ ನಡೆದ ಕಾದಾಟದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್(೨೯) ಅವರ ನಿವಾಸದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬ ಸದಸ್ಯರಲ್ಲಿ ದುಃಖ ಮುಡುಗಟ್ಟಿದೆ.


ಪ್ರಾಂಜಲ್ ಹುತಾತ್ಮರಾದ ಬಗ್ಗೆ ಮನೆಯವರಿಗೆ ಕರೆ ಬಂದಿದ್ದು, ಜಿಗಣಿ ಸಮೀಪದ ಕಲ್ಲುಬಾಳು ಗ್ರಾಮದ ನಂದನವನ ಬಡಾವಣೆಯಲ್ಲಿ ಪ್ರಾಂಜಲ್ ಅವರ ತಂದೆ ವೆಂಕಟೇಶ್ ದಂಪತಿ ವಾಸವಿರುವ ವಿಚಾರ ತಿಳಿದು ಮನೆಯ ಬಳಿ ಕುಟುಂಬಸ್ಥರು ಹಾಗೂ ಆಪ್ತರು ಆಗಮಿಸಿ ಧೈರ್ಯ ತುಂಬುತ್ತಿದ್ದಾರೆ.
ಪಾರ್ಥಿವ ಶರೀರವನ್ನು ಶುಕ್ರವಾರ ತಡರಾತ್ರಿ ತರುವ ಸಾಧ್ಯತೆ ಇದ್ದು, ನಂದನವನ ಬಡಾವಣೆಯ ವೆಂಕಟೇಶ್ ಅವರ ನಿವಾಸದ ಬಳಿ ಶನಿವಾರ ಬೆಳಗ್ಗೆ ಅಂತಿಮ ನಮನ ಸಲ್ಲಿಸಲು ಹಾಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆಗಳು ನಡೆದಿದೆ.


ನವಂಬರ್ ಒಂದರಂದು ಆಗಮಿಸಿದ್ದ ಪ್ರಾಂಜಲ್:
ಮೈಸೂರಿನಲ್ಲಿರುವ ಚಿಕ್ಕಪ್ಪನ ಮಗಳ ಮದುವೆ ಹಿನ್ನೆಲೆಯಲ್ಲಿ ನಂಬರ್ ಒಂದನೇ ತಾರೀಖಿನಂದು ಬೆಂಗಳೂರಿಗೆ ಆಗಮಿಸಿದ್ದ ಪ್ರಾಂಜಲ್ ಅವರು, ಮೈಸೂರಿನಲ್ಲಿ ಮದುವೆ ಮುಗಿಸಿ ಅಂದೆ ವಾಪಸ್ ಸೇನೆಗೆ ತೆರಳಿದ್ದರು. ಸಮಯ ಕಡಿಮೆ ಇದ್ದ ಹಿನ್ನೆಲೆ ತಂದೆ ತಾಯಿಯನ್ನು ಮಾತನಾಡಿಸಿ ವಾಪಸ್ ತೆರಳಿದ್ದರು.


ಕ್ಯಾಪ್ಟನ್ ಪ್ರಾಂಜಲ್-ಎರಡು ವರ್ಷದ ಹಿಂದೆ ಬೆಂಗಳೂರಿನ ಅದಿತಿ ಎಂಬುವವರ ತೆ ವಿವಾಹವಾಗಿದ್ದರು. ಪತ್ನಿ ಅಧಿತಿ ಚೆನ್ನೈನಲ್ಲಿ ಪಿ.ಎಚ್‌ಡಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪತಿಯ ನಿಧನ ಹಿನ್ನೆಲೆ ಜಿಗಣಿ ಸಮೀಪದ ಬುಕ್ಕಸಾಗರ ನಿವಾಸಕ್ಕೆ ಆಗಮಿಸಿದ್ದಾರೆ.


ಪ್ರಾಂಜಾಲ್ ತಂದೆ ತಾಯಿ ಮೈಸೂರಿನವರು. ಕಳೆದ ಕೆಲವು ವರ್ಷ ತಂದೆ ತಾಯಿ ಜತೆ ಮಂಗಳೂರಿನಲ್ಲಿಯೂ ವಾಸವಿದ್ದರು. ಶಾಲಾ ಕಾಲೇಜು ವಿದ್ಯಾಭ್ಯಾಸವನ್ನು ಸಹ ಮಂಗಳೂರಿನಲ್ಲಿ ಪ್ರಾಂಜಲ್ ಮಾಡಿದ್ದರು. ಮಂಗಳೂರಿನ ಎಮ್.ಆರ್.ಪಿ.ಎಲ್ ಶಾಲೆ ವಿದ್ಯಾಭ್ಯಾಸ ಮುಗಿಸಿದ ಬಳಿಕ ಮಂಗಳೂರಿನ ಮಹೇಶ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಪಡೆದಿದ್ದು, ಅದಾದ ಬಳಿಕ ಮಧ್ಯಪ್ರದೇಶದ ಆರ್ಮಿ ಕಾಲೇಜಿಗೆ ಸೇರಿಕೊಂಡಿದ್ದರು.
ಕಳೆದ ಎರಡು ವರ್ಷದಿಂದ ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಾಂಜಲ್ ಆಗಾಗ ಕಲ್ಲುಬಾಳು ಸಮೀಪದ ನಂದನವನ ಬಡಾವಣೆಯಲ್ಲಿರುವ ಮನೆಗೆ ಆಗಮಿಸಿ ತಂದೆ ತಾಯಿ ಹಾಗೂ ಪತ್ನಿ ಜತೆ ಇದ್ದು ಸೇನೆಗೆ ಮರಳುತ್ತಿದ್ದರು.


ಹುತಾತ್ಮರಾದ ಪ್ರಾಂಜಲ್ ಅವರ ಕುಟುಂಬಸ್ಥರು ಅವರನ್ನು ನೆನೆದು ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡು ಬಂತು.
ತಂದೆ ವೆಂಕಟೇಶ್ ಅವರು, ಮಂಗಳೂರಿನ ಎಂಆರ್‌ಪಿಎಲ್ನ ನಿವೃತ್ತ ಆಡಳಿತ ನಿರ್ದೇಶಕರಾಗಿದ್ದು ಕಳೆದ ಕೆಲವು ತಿಂಗಳ ಹಿಂದೆ ನಿವೃತ್ತರಾಗಿ ಜಿಗಣಿಯ ನಂದನವನ ಬಡಾವಣೆಯಲ್ಲಿ ಕುಟುಂಬದ ಜತೆ ವಾಸವಿದ್ದರು.


ಕೂಡ್ಲು ಚಿತಾಗಾರದಲ್ಲಿ ಅಂತಿಮ ಕ್ರಿಯೆ:
ಜಗಣಿಯ ನಂದನವನ ಬಡಾವಣೆಯಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಿಸಿದ ಬಳಿಕ ಪರಪ್ಪನ ಅಗ್ರಹಾರ ಸಮೀಪದ ಕೂಡ್ಲು ಚಿತಾಗಾರದಲ್ಲಿ ಅಂತಿಮ ಕ್ರಿಯೆಯನ್ನು ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.
ಅಂತಿಮ ನಮನ ಸಲ್ಲಿಸಲು ಎಂಆರ್‌ಪಿಎಲ್ ಅಧಿಕಾರಿಗಳ ತಂಡ ಆಗಮಿಸಿದ್ದು, ಬೆಂಗಳೂರು ಎಂ ಆರ್‌ಪಿಎಲ್ ಉಸ್ತುವಾರಿ ಸುದರ್ಶನ್ ಅವರ ನೇತೃತ್ವದಲ್ಲಿ ಸಿದ್ದತೆಗಳು ನಡೆದಿದೆ.


ಅವನ ಮನಸ್ಸು ಅತ್ಯಂತ ಮೃದು:
ಪ್ರಾಂಜಲ್ ನಾಲ್ಕು ದಿನದ ಹಿಂದೆ ನಮಗೆ ಕರೆ ಮಾಡಿದ್ದ. ಇಂಟಲಿಜೆನ್ಸಿ ಇನ್ಪುಟ್ ಇರುವುದರಿಂದ ನಾನೇ ಮತ್ತೆ ಕರೆ ಮಾಡುತ್ತೇನೆ ಎಂದು ಹೇಳಿದ ಅದಾದ ಬಳಿಕ ನಮಗೆ ಮೆಸೇಜ್ ಮಾಡಿದ್ದ. ಅವನ ಮೆಸೇಜು ನೋಡಿ ಓಕೆ ಹೇಳುತ್ತಿದ್ದೆವು. ಒಂದೊಂದು ಬಾರಿ ಬರುವ ಮೆಸೇಜ್‌ಗಳು ಅಲ್ಲಿನ ಆತಂಕವನ್ನು ಸೂಚಿಸುತ್ತಿದ್ದವು. ಮೊನ್ನೆ ಅವನ ಕಮಾಂಡರ್ ಆಫೀಸ್‌ನಿಂದ ಕರೆ ಬಂದಿತ್ತು ಅವರು ನಮಗೆ ಈ ದುಃಖದ ವಿಚಾರವನ್ನು ತಿಳಿಸಿದರು. ಪ್ರಾಂಜಲ್ ನೋಡಲು ರಫ್ ಆಗಿ ಕಾಣಿಸುತ್ತಾನೆ. ಆದರೆ ಅವನ ಮನಸ್ಸು ಅತ್ಯಂತ ಮೃದುವಾದದ್ದು, ಮೃದು ಸ್ವಭಾವದ ಮೂಲಕವೇ ಅವನು ಎಲ್ಲರ ಜತೆಯೂ ಅತ್ಯಂತ ಒಳ್ಳೆಯವನಾಗಿದ್ದ. ಅವನ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವನು ನಮ್ಮ ಜತೆ ಇಲ್ಲ ಎನ್ನುವ ದುಃಖ ಆಗುತ್ತಿದೆ. ಜನರ ಋಣ ತೀರಿಸಲು ಆಭಾರಿಯಾಗಿದ್ದೇನೆ ಎಂದು ಪ್ರಾಂಜಲ್ ತಂದೆ ವೆಂಕಟೇಶ್ ಕಣ್ಣೀರು ಹಾಕಿದ್ದಾರೆ.