ಜಿಲ್ಲೆ

ಏಳು ಬೀಳು ನಡುವೆ ಸಾಧನೆ ಮಾಡಿದ ಕೃಷಿಕರಿಗೆ ಪ್ರಶಸ್ತಿ - ನೇಗಿಲ ಯೋಗಿ ಅಂಕಣದಲ್ಲಿ ಬೆಳಕಿಗೆ ತಂದಿದ್ದ ವಿಜಯವಾಣಿ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ನೇಗಿಲಯೋಗಿ ವಿಜಯವಾಣಿ ಅಂಕಣದಲ್ಲಿ ಗುರುತಿಸಲ್ಪಟ್ಟ ಮೂವರು ಕೃಷಿ ಸಾಧಕರಿಗೆ ಕೃಷಿ ಇಲಾಖೆ ಪ್ರಶಸ್ತಿ ನೀಡಿ ಗೌರವಿಸಿದ್ದು, ಇಲಾಖೆ ಕಾರ್ಯಕ್ಕೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ವ್ಯವಸಾಯ ಕಷ್ಟ. ನೀರಿಲ್ಲ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ, ಮಾರುಕಟ್ಟೆ ಏರಿಳಿತ ಹೀಗೆ ಅನೇಕ ಸಮಸ್ಯೆಯಲ್ಲಿ ರೈತ ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಾ ಕಾಯಕ ಬಿಡದೆ ದೇಶಕ್ಕೆ ಅನ್ನ ನೀಡುತ್ತಿದ್ದಾನೆ. ವ್ಯವಸಾಯವನ್ನೇ ನಂಬಿ, ಅದರಲ್ಲೇ ಸಾಧನೆ ಮಾಡಲು ಹೊರಟಿರುವ ನೂರಾರು ರೈತರು ಕಾಣಸಿಗುತ್ತಾರೆ.

ಕೃಷಿಯಲ್ಲಿ ಯಶಸ್ಸು ಸಾಧಿಸಿ ಹಲವು ವಿಶೇಷ ಬೆಳೆ, ಅಪರೂಪದ ತೋಟದ ಕೃಷಿ, ಸಮಗ್ರ ಬೇಸಾಯದ ಮೂಲಕ ಸಾಧನೆ ಮಾಡಿದವರನ್ನು, ಮಾಡುತ್ತಿರುವವರನ್ನು ಗುರುತಿಸಿ ವಿಜಯವಾಣಿ ಪತ್ರಿಕೆ ಪ್ರತಿ ಭಾನುವಾರ ನೇಗಿಲ ಯೋಗಿ ಅಂಕಣದ ಮೂಲಕ ಜಿಲ್ಲೆಯ ರೈತರನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ.

ವಿಜಯವಾಣಿ ಪತ್ರಿಕೆ ನೇಗಿಲಯೋಗಿ ಅಂಕಣದ ಮೂಲಕ ಇದುವರೆಗೆ ಜಿಲ್ಲೆಯ ಹಲವಾರು ಕೃಷಿ ಸಾಧಕರನ್ನು ಗುರುತಿಸಿದ್ದು, ಈ ಪೈಕಿ ಜಿಲ್ಲೆಯ ಮೂವರಿಗೆ ಬೆಂಗಳೂರಿನಲ್ಲಿ ಕೃಷಿ ಮೇಳದಲ್ಲಿ ರಾಜ್ಯಮಟ್ಟ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ಲಭಿಸಿದೆ. ಕಗ್ಗಲಹಳ್ಳಿಯ ಶಾಂತಮ್ಮ ಎಂಬ ರೈತ ಸಾಧಕಿಯನ್ನು ಮೊಟ್ಟ ಮೊದಲ ಬಾರಿಗೆ ಗುರುತಿಸಿದ್ದ ವಿಜಯವಾಣಿ, ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇದೀಗ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದು, ಕಳೆದ ವರ್ಷ ತಾಲೂಕು ಮಟ್ಟ, ಬಾಗಲಕೋಟೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕಾ ರೈತ ಮಹಿಳೆ ಪ್ರಶಸ್ತಿ ಸಂದಿದೆ. ಜತೆಗೆ ಸಂಘ ಸಂಸ್ಥೆಗಳು ಗುರ್ತಿಸಿ ಪ್ರಶಸ್ತಿ, ನೀಡಿ ಗೌರವಿಸಿರುವುದನ್ನು ಕಾಣಬಹುದು.

ಯಾರಿಗೆ, ಯಾವ ಪ್ರಶಸ್ತಿ?

ಕೃಷಿ ಮೇಳದಲ್ಲಿ ರಾಮನಗರ ತಾಲೂಕಿನ ಬಿಳಗುಂಬ ವಾಸು ಅವರಿಗೆ ರಾಜ್ಯಮಟ್ಟದ ಕ್ಯಾನ್‌ಬ್ಯಾಂಕ್ ಅತ್ಯುತ್ತಮ ರಾಜ್ಯಮಟ್ಟದ ಪ್ರಶಸ್ತಿ, ರಾಮನಗರ ಜಿಲ್ಲಾಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ಲಭಿಸಿದೆ. ರಾಮನಗರ ತಾಲೂಕಿನ ಟಿ.ಸಿ. ಚೇತನ್‌ಕುಮಾರ್ ಅವರಿಗೆ ಜಿಲ್ಲಾಮಟ್ಟದ ಪ್ರಗತಿಪರ ರೈತ ಪ್ರಶಸ್ತಿ , ರಾಮನಗರ ತಾಲೂಕಿನ ಕಗ್ಗಲಹಳ್ಳಿ ಶಾಂತಮ್ಮ ಅವರಿಗೆ ಉತ್ತಮ ರೈತ ಮಹಿಳೆ ಪ್ರಶಸ್ತಿ ಸಂದಿದೆ.

ಸಾಧಕರ ಕೃಷಿ

ಉತ್ತಮ ರೈತ ಸಾಧಕ ಬಿಳಗುಂಬ ವಾಸು ಅವರು ವಿದೇಶಿ ತಳಿ ಮಾವು, ಸಿರಿಧಾನ್ಯ ಬೆಳೆ, ಸಿರಿಧಾನ್ಯ ಉತ್ಪಾದನಾ ಘಟಕ, ಕುರಿ ಸಾಕಣೆ ಜತೆಗೆ ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ. ತಾಳವಾಡಿಯ ಟಿ.ಸಿ. ಚೇತನ್‌ಕುಮಾರ್, ಪದವೀಧರ ಯುವ ರೈತನಾಗಿದ್ದು, ಹನಿ ನೀರಾವರಿ ಮೂಲಕ ಸಮಗ್ರ ಬೇಸಾಯ ನಡೆಸಿ ವಿಶೇಷವಾಗಿ ಡ್ರಾೃಗನ್ಪ್ಟ್ರ ಫ್ರೂಟ್ ಬೆಳೆಯುವ ಮೂಲಕ ಗಮನ ಸೆಳೆದು ಮಾದರಿ ರೈತನಾಗಿ ಗುರ್ತಿಸಿಕೊಂಡಿದ್ದಾರೆ. ಪತಿ ಅನಾರೋಗ್ಯದಿಂದ ಕೃಷಿ ನಿರ್ವಹಣೆ ಕಷ್ಟವಾದಾಗ ಸ್ವತಃ ಕೃಷಿ ಕಾರ್ಯಕ್ಕಿಳಿದ ಕಗ್ಗಲಹಳ್ಳಿಯ ಶಾಂತಮ್ಮ ಜೇನು, ಹೂವು ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆದು ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವುದಲ್ಲದೆ, ಸ್ವತಃ ಟ್ರ್ಯಾಕ್ಟರ್ ಚಾಲನೆ, ಯಂತ್ರೋಪಕರಣಗಳ ಬಳಕೆ, ರೇಷ್ಮೆ ಬೆಳೆ ಬೆಳೆದು ಉತ್ತಮ ರೈತ ಸಾಧಕಿಯಾಗಿ ಗುರ್ತಿಸಿಕೊಂಡಿದ್ದಾರೆ.

ಪ್ರಶಸ್ತಿ ಸಂತಸ ತಂದಿದ್ದು, ಕೃಷಿಯಲ್ಲಿ ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಣೆ ಸಿಕ್ಕಂತಾಗಿದೆ. ವಿಜಯವಾಣಿ ನನ್ನ ಕಿರು ಸಾಧನೆಯನ್ನು ಗುರ್ತಿಸಿ ಮತ್ತಷ್ಟು ನೀರೆರೆದಿದೆ. ನನ್ನಂತಹ ನೂರಾರು ಯುವ ರೈತರ ಸಾಧನೆಗಳನ್ನು ವಿಜಯವಾಣಿ ಗುರುತಿಸಲಿ. ಪತ್ರಿಕೆಯ ಸಮಾಜಮುಖಿ ಕಾರ್ಯ ಮತ್ತಷ್ಟು ರೈತರಿಗೆ ಪೂರಕವಾಗಲಿ.

ಟಿ.ಸಿ. ಚೇತನ್‌ಕುಮಾರ್, ತಾಳವಾಡಿ. ಜಿಲ್ಲಾಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕೃತರು

ಸಾಧಕಿ ಆಗಬೇಕೆಂದು ಕೃಷಿ ಆಯ್ಕೆ ಮಾಡಿಕೊಂಡವಳಲ್ಲ. ಅನಿವಾರ್ಯವಾಗಿ ಕೃಷಿ ನನ್ನ ಕೈಹಿಡಿಯಿತು. ನನ್ನ ಸಾಧನೆಗೆ ಕೃಷಿ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ನೀರೆರೆದು ಪೋಷಿಸಿದ್ದಾರೆ. ಅವರ ಮಾರ್ಗದರ್ಶನದಿಂದ ಇಂದು ಕೃಷಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ತೆರೆಮರೆಯಲ್ಲಿದ್ದ ನನ್ನನ್ನು ಮೊಟ್ಟ ಮೊದಲು ಗುರ್ತಿಸಿ ಗೌರವಿಸಿದ ವಿಜಯವಾಣಿ ಪತ್ರಿಕೆಗೆ ಧನ್ಯವಾದಗಳು.

ಶಾಂತಮ್ಮ, ಕಗ್ಗಲಹಳ್ಳಿ. ಜಿಲ್ಲಾಮಟ್ಟದ ಪ್ರಗತಿಪರ ರೈತ ಮಹಿಳಾ ಪ್ರಶಸ್ತಿ ಪುರಸ್ಕೃತೆ

ಕೃಷಿಯಲ್ಲಿ ಸಾಧನೆ ಮಾಡುವುದು ಸುಲಭವಲ್ಲ. ಸಾಧನೆಗೆ ನೂರಾರು ಮೆಟ್ಟಿಲುಗಳು ಬೇಕು. ನನ್ನ ಸಾಧನೆಗೆ ಕುಟುಂಬ ಬೆನ್ನೆಲುಬಾಗಿ ನಿಂತಿದೆ. ಜತೆಗೆ ಕೃಷಿ, ತೋಟಗಾರಿಕೆ ಅಧಿಕಾರಿಗಳು, ವಿಜ್ಞಾನಿಗಳ ಮಾರ್ಗದರ್ಶನ ಕಾರಣವಾಗಿದೆ. ನನ್ನ ಸಾಧನೆಗೆ ಮತ್ತಷ್ಟು ಬೆಳಕು ಚೆಲ್ಲಿದ್ದು ವಿಜಯವಾಣಿ ಪತ್ರಿಕೆ. ರಾಜ್ಯಮಟ್ಟದ ಪ್ರಶಸ್ತಿ ಒಲಿದಿರುವುದು ಹೆಮ್ಮೆ ತಂದಿದೆ.

ವಾಸು ಬಿಳಗುಂಬ, ಕ್ಯಾನ್‌ಬ್ಯಾಂಕ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಪುರಸ್ಕೃತರು