ಮಡಿಕೇರಿ:
ಕೊಡಗಿನ ಹೆಬ್ಬಾಗಿಲು ಹೆಗ್ಗಳಿಕೆಯ ಕುಶಾಲನಗರದ ಹೃದಯ ಭಾಗದಲ್ಲಿ ದೇಶದ ಹೆಮ್ಮೆಯ ಸೇನಾನಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿನ ವೃತ್ತಕ್ಕೆ ಆಕರ್ಷಕ ರೂಪ ನೀಡಲಾಗುತ್ತಿದೆ. ಈ ಹಿಂದೆ ಇದ್ದ ಸ್ಥಳದಲ್ಲೇ ಕಾರ್ಯಪ್ಪ ಅವರ ವೃತ್ತ ಮತ್ತೆ ತಲೆಯೆತ್ತಲಿದ್ದು, ಪುತ್ಥಳಿ ಸ್ಥಾಪನೆಯ ಪ್ರಸ್ತಾಪವೂ ಇದೆ. ವೀರ ಸೇನಾನಿಯ ನೆನಪು ಅಜರಾಮರಗೊಳಿಸುವುದರ ಜತೆಗೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಕಣ್ಮನ ಸೆಳೆಯುವ ರೀತಿಯಲ್ಲಿ ವೃತ್ತವನ್ನು ವಿನ್ಯಾಸಗೊಳಿಸಲಾಗಿದ್ದು, ಸದ್ಯದಲ್ಲೇ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ.
ಕೊಡಗಿನ ಯೋಧ ಪರಂಪರೆಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಅವರಿಗೆ ವಿಶೇಷವಾದ ಸ್ಥಾನವಿದೆ. ಜಿಲ್ಲೆ ಬಿಟ್ಟು ಹೊರಗೆ ಹೋದರೆ ಈ ಇಬ್ಬರು ಮಹಾನ್ ನಾಯಕರ ಹೆಸರಿನೊಂದಿಗೆ ಕೊಡಗಿನವರನ್ನು ಗುರುತಿಸಲಾಗುತ್ತದೆ. ಈ ನೆಲದ ವೀರ ಸೇನಾನಿಗಳ ಹೆಸರನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಕೊಡಗಿನಲ್ಲಿ ಸ್ಮಾರಕಗಳು ಇದೆ, ರಸ್ತೆ, ವೃತ್ತ, ಬಡಾವಣೆಗಳಿಗೆ ಹೆಸರು ಇಡಲಾಗಿದೆ. ಕೆಲವರು ತಮ್ಮ ಮಕ್ಕಳಿಗೂ ಇವರ ಹೆಸರು ಇಟ್ಟು ಗೌರವ ಸಲ್ಲಿಸಿದ್ದಾರೆ. ಕುಶಾಲನಗರದಲ್ಲೂ ಪ್ರಮುಖ ವೃತ್ತಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿಟ್ಟು ಸ್ಮರಣೀಯರನ್ನಾಗಿರಿಸುವ ಕೆಲಸ ಮಾಡಲಾಗಿದೆ.
ಕುಶಾಲನಗರದ ಅದಿದೇವತೆ ಶ್ರೀ ಗಣಪತಿ ದೇವಾಲಯದ ಮುಂದಿನ ವೃತ್ತವನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತವನ್ನಾಗಿ ಹೆಸರಿಸಲಾಗಿದೆ. ಮೈಸೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ ೨೭೫ ಈ ವೃತ್ತದ ಮೂಲಕವೇ ಹಾದುಹೋಗುತ್ತದೆ. ಪಟ್ಟಣದ ಪ್ರಮುಖ ವಾಣಿಜ್ಯ ಚಟುವಟಿಕೆಯ ಸ್ಥಳ ರಥ ಬೀದಿ, ಐಬಿ ರಸ್ತೆ ಹಾಗೂ ಅಯ್ಯಪ್ಪ ದೇವಾಲಯ ರಸ್ತೆಗೆ ಇದೇ ವೃತ್ತ ಪ್ರಮುಖ ಸಂಪರ್ಕ ವೃತ್ತವಾಗಿದೆ. ಜಿಲ್ಲೆಯಲ್ಲೇ ವೇಗವಾಗಿ ಬೆಳೆಯುತ್ತಿರುವ ಪಟ್ಟಣದ ಹೃದಯಭಾಗದಲ್ಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಗಮನ ಸೆಳೆಯುತ್ತಿದೆ.
ವಾಹನ ಚಾಲಕರ ಅಜಾಗರೂಕತೆಯ ಚಾಲನೆಯಿಂದ ವೃತ್ತಕ್ಕೆ ಸಾಕಷ್ಟು ಹಾನಿ ಸಂಭವಿಸಿತ್ತು. ಅದರಲ್ಲೂ ರಾತ್ರಿ ವೇಳೆ ಇಲ್ಲಿ ವೃತ್ತಕ್ಕೆ ವಾಹನಗಳು ಡಿಕ್ಕಿ ಹೊಡೆದು ಅಂದಗೆಡಿಸಿದ್ದವು. ಈ ಹಿನ್ನೆಲೆಯಲ್ಲಿ ವೃತ್ತದ ಮರುನಿರ್ಮಾಣಕ್ಕೆ ಮುಂದಾಗಿರುವ ಕುಶಾಲನಗರ ಪುರಸಭೆ ಈಗ ಹೆಚ್ಚಿನ ಮುಂಜಾಗ್ರತೆಯೊಂದಿಗೆ ಕಾಮಗಾರಿ ನಡೆಸುತ್ತಿದೆ. ವೃತ್ತದ ರಕ್ಷಣೆಗೆ ಆದ್ಯತೆ ಕೊಡಲಾಗಿದ್ದು, ಸುತ್ತಲಿನ ಪಾದಚಾರಿ ಮಾರ್ಗ ಸೇರಿದಂತೆ ಒಟ್ಟು ೭.೩ ಲಕ್ಷ ರೂ. ವೆಚ್ಚದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತವನ್ನು ನವೀಕರಣಗೊಳಿಸಲಾಗುತ್ತಿದೆ. ಇನ್ನು ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮರುನಿರ್ಮಾಣ ಆಗುತ್ತಿರುವ ವೃತ್ತದ ಸ್ಥಂಬ ಒಟ್ಟು ೧೦.೬ ಅಡಿ ಎತ್ತರ ಇರಲಿದೆ. ಇದರ ಮೇಲೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪುತ್ಥಳಿ ಪ್ರತಿಷ್ಠಾಪಿಸುವ ಪ್ರಸ್ತಾಪ ಇದ್ದು, ಇನ್ನಷ್ಟೇ ಅಂತಿಮ ನಿರ್ಧಾರ ಆಗಬೇಕಿದೆ. ಸ್ಥಂಬದ ಪೀಠ ೪ ಹಂತಗಳನ್ನು ಒಳಗೊಂಡಿದ್ದು ೩.೪ ಅಡಿ ಎತ್ತರವಾಗಿರುತ್ತದೆ. ಮೊದಲ ಹಂತದ ಪೀಠ ೭.೧ ಅಡಿ ಅಗಲ ಇರುತ್ತದೆ. ೨ನೇ ಹಂತ ೪.೮ ಅಡಿ ಅಗಲ ಹೊಂದಿರುತ್ತದೆ. ಮೂರನೇ ಹಂತ ೪ ಅಡಿ ಹಾಗೂ ನಾಲ್ಕನೇ ಹಂತ ೩.೪ ಅಡಿ ಅಗಲವಾಗಿರಲಿದೆ. ಇದರ ಮೇಲೆ ವೀರ ಸೇನಾನಿಯ ಬಗ್ಗೆ ಮಾಹಿತಿ ನೀಡುವ ಫಲಕ ಅಳವಡಿಸಲು ೪.೨ ಅಡಿ ಎತ್ತರದ ಮತ್ತು ೨.೮ ಅಡಿ ಅಗಲದ ರಚನೆ ನಿರ್ಮಾಣ ಆಗಲಿದೆ. ಪುನಃ ದರ ಮೇಲ್ಭಾಗದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರು ನಮೂದಿಸಲು ೨.೬ ಅಡಿ ಎತ್ತರದ ೨ ಅಡಿ ಅಗಲದ ಇನ್ನೊಂದು ರಚನೆ ನಿರ್ಮಾಣ ಆಗಲಿದೆ. ಪುತ್ಥಳಿ ಇದರ ಮೇಲ್ಭಾಗದಲ್ಲಿ ಪ್ರತಿಸ್ಠಾಪಿಸುವ ಯೋಜನೆ ಇದೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕುಶಾಲನಗರದ ಜಿಎಂಪಿ ಶಾಲೆಯಲ್ಲೂ ಓದಿದ್ದರು ಎನ್ನುವ ಕಾರಣಕ್ಕೆ ಪಟ್ಟಣದ ಜನತೆಗೆ ಭಾವನಾತ್ಮಕ ನಂಟು ಕೂಡ ಇದೆ. ಹಾಗಾಗಿಯೇ ಈ ವೃತ್ತಕ್ಕೆ ಸಾಕಷ್ಟು ಮಹತ್ವವಿದೆ. ಪ್ರಮುಖ ಆಚರಣೆಗಳು, ವಿಜಯೋತ್ಸವಗಳನ್ನು ಇಲ್ಲಿಯೇ ಸಂಘಟಿಸಲಾಗುತ್ತದೆ. ಪ್ರತಿಭಟನೆಗಳೂ ಈ ವೃತ್ತದಲ್ಲೇ ಆಯೋಜನೆಗೊಳ್ಳುತ್ತದೆ. ಹೀಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಯಾವಾಗಲೂ ಜನ ಸಂದಣಿಯಿಂದ ಕೂಡಿರುವುದರಿಂದ ವೃತ್ತದ ಸ್ಥಂಬದ ಮೇಲೆ ಕಾರ್ಯಪ್ಪ ಅವರ ಪುತ್ಥಳಿ ಸ್ಥಾಪನೆಯ ಅಗತ್ಯವೂ ಇದೆ. ಪುತ್ಥಳಿಯಿಂದ ಹಲವರು ಸ್ಫೂರ್ತಿ ಪಡೆಯಲು ಸಾಧ್ಯವಾಗಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.