ಕಾಸರಗೋಡು: ಗಡಿನಾಡಿನ ಭಾಷಾ ಅಲ್ಪಸಂಖ್ಯಾತರ ಸಂವಿಧಾನಾತ್ಮಕ ಸವಲತ್ತುಗಳನ್ನು ಕಸಿದುಕೊಳ್ಳಲಾಗುತ್ತಿದ್ದು, ಇದರ ವಿರುದ್ಧ ಸಾಮೂಹಿಕ ಹೋರಾಟ ನಡೆಸುವುದು ಅನಿವಾರ್ಯ. ಭಾಷೆ, ಸಂಸ್ಕೃತಿ ಉಳಿಸುವ ಹಕ್ಕನ್ನು ಒಕ್ಕೂಟ ವ್ಯವಸ್ಥೆ ಒದಗಿಸಿಕೊಟ್ಟಿದೆ. ಈ ಹಕ್ಕನ್ನು ದಮನಿಸುವ ಯತ್ನ ನಡೆಯುತ್ತಿದ್ದರೆ, ಇದು ಸಂವಿಧಾನಕ್ಕೆ ಎಸಗುವ ಅಪಚಾರ. ಇದನ್ನು ರಾಷ್ಟ್ರಪತಿಯ ಗಮನಕ್ಕೆ ತರುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಬೇಕಾಗಿದೆ ಎಂಬುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಶನಿವಾರ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಸನಿಹದ ‘ಕಲಾಸ್ಪರ್ಶಂ ಸಭಾಂ ಗಣ’ದಲ್ಲಿ ಕೇರಳ ಮತ್ತು ಗೋವಾ ರಾಜ್ಯಗಳ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.ಪ್ರಮುಖರಾದ ಡಾ.ಜ್ಯೋತಿ ಚೇಳ್ಯಾರು, ಶಮೀನಾ ಇಕ್ಬಾಲ್, ಗೋಲ್ಡನ್ ರಹಮಾನ್, ಜೀನ್ ಲವೀನಾ ಮೊಂತೇರೋ, ಟಿ.ಗುರುರಾಜ್, ಯಾಕೂಬ್ ಖಾದರ್ ಗುಲ್ವಾಡಿ, ಎ.ಆರ್.ಸುಬ್ಬಯ್ಯಕಟ್ಟೆ, ಗೋಪಾಲ ಶೆಟ್ಟಿ ಅರಿಬೈಲು,ಜಡ್ ಎ.ಕಯ್ಯರ್, ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ರವಿ ನಾಯ್ಕಪು, ಪಿ.ಬಿ.ಶ್ರೀನಿವಾಸ ರಾವ್, ಪ್ರೊ.ಮಹಮ್ಮದಾಲಿ ಪೆರ್ಲ, ಡಾ.ಸುಜಾತಾ ಎಸ್.ಉಪಸ್ಥಿತರಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಶ್ರುತಿ ಬೆಂಗಳೂರು ನಿರೂಪಿಸಿ, ವಂದಿಸಿದರು.
ಗೋವಾದ ಆರು ಮಂದಿ ಸೇರಿ 149 ಮಂದಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಥಮ 12 ಸಾವಿರ, ದ್ವಿತೀಯ 11 ಸಾವಿರ ಹಾಗೂ ತೃತೀಯ 10 ಸಾವಿರ ರೂ. ಪ್ರಶಸ್ತಿ ಒಳಗೊಂಡಿತ್ತು.
ಹೊರನಾಡು ಹಾಗೂ ಗಡಿನಾಡಿನಲ್ಲಿ ಕನ್ನಡ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ವಾರ್ಷಿಕ ತಲಾ 25ಸಾವಿರ ರೂ.ನಂತೆ ವಿತರಿಸುತ್ತಿದ್ದ ವಿದ್ಯಾರ್ಥಿ ವೇತನವನ್ನು ಕರೊನಾ ನಂತರ ಸ್ಥಗಿತಗೊಳಿಸಲಾಗಿದೆ. ನಾಲ್ಕು ವರ್ಷಗಳಿಂದ ಈ ಮೊತ್ತ ಬಾಕಿಯಿದೆ. ನಾಲ್ಕು ವರ್ಷದ ಮೊತ್ತ ನೀಡಲು ಕನಿಷ್ಠ ಆರು ಕೋಟಿ ರೂ.ಅಗತ್ಯವಿದ್ದು, ಅದನ್ನು ನೀಡಲು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು. ಹಣ ಬಿಡುಗಡೆಗೊಂಡಲ್ಲಿ ಕಾಸರಗೋಡು ಅಥವಾ ಮಂಜೇಶ್ವರದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ವಿತರಿಸಲಾಗುವುದು ಎಂದು ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಗಡಿನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಭಾಷಾ ನಿರ್ದೇಶಕರ ನೇಮಕಾತಿ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಸಮಾಲೋಚಿಸಲಾಗುವುದು. - ಡಾ.ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ https://www.vijayavani.net/third-in-judo-martial-art https://www.vijayavani.net/bronze-in-judo-martial-art