ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಅವರು ತಮ್ಮ ಪ್ರಕರಣದ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಕರಣವನ್ನು ಇನ್ನೊಬ್ಬರ ಪ್ರಕರಣದ ಜತೆಗೆ ಹೋಲಿಕೆ ಮಾಡಬಾರದು ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶೋಕ ಅವರ ತಪ್ಪಿಲ್ಲ ಎಂದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಈಗ ಮುಡಾ ಹಗರಣ ಎದ್ದಿದೆ. ತನಿಖೆಗೆ ಆದೇಶವೂ ಆಗಿದೆ. ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಅವಕಾಶ ಸಹ ಕೊಡಲಿಲ್ಲ. ಚರ್ಚೆಯ ಪ್ರಸ್ತಾಪವನ್ನೇ ತಿರಸ್ಕಾರ ಮಾಡಿಸಿದರು ಎಂದು ದೂರಿದರು.
ಪ್ರಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ಪತ್ನಿಯ ಹೆಸರನ್ನು ಬೀದಿಗೆ ತರುವ ಕೆಲಸವನ್ನು ವಿಪಕ್ಷ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಅವರ ಹೆಸರನ್ನು ಬೀದಿಗೆ ತಂದವರೇ ಸಿದ್ದರಾಮಯ್ಯ. ಕಾನೂನಿನ 50:50 ನಿಯಮ ಮೀರಿ 14 ಸೈಟ್ ತೆಗೆದುಕೊಂಡಿದ್ದಾರೆ. ರಾಜಕೀಯವಾಗಿ ಮಾತ್ರ ಮಾತನಾಡುತ್ತಿದ್ದಾರೆ. ಆ ಸೈಟ್ಗಳ ಬಗ್ಗೆ ವಿವರಣೆಯನ್ನೇ ನೀಡಿಲ್ಲ. ತಪ್ಪುಗಳ ಮೇಲೆ ತಪ್ಪಾಗಿವೆ. ಆದರೆ ಇವರು ತಾವು ಅಮಾಯಕರೆಂದು ಹೇಳಿಕೊಳ್ಳುತ್ತಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರು ಮೇಲ್ನೋಟಕ್ಕೆ ಭಾಗಿಯಾಗಿದ್ದಾರೆ ಎಂದೆನಿಸುತ್ತಿದೆ ಎಂದರು.
ಸಿಎಂ ಮೇಲಿನ ಆರೋಪ ರದ್ದಾಗಲು ಸಾಧ್ಯವೇ ಇಲ್ಲ. ತಪ್ಪು ಮಾಡಿಲ್ಲ ಎಂದಾದ ಮೇಲೆ ನಿವೇಶನ ವಾಪಸ್ ಮಾಡಿದ್ದೇಕೆ? ಎಂದು ಪ್ರಶ್ನಿಸಿದ ಅವರು, ಕಳ್ಳ ಮಾಲು ವಾಪಸ್ ಕೊಡುತ್ತಾರೆ ಎಂದಾದರೆ ಅವರ ಮೇಲಿನ ಆಪಾದನೆ ಹೋಗುವುದಿಲ್ಲ. ಶಿಕ್ಷೆ ಆಗಿಯೇ ಆಗುತ್ತದೆ. ಸಿದ್ದರಾಮಯ್ಯ ನಿರಪರಾಧಿಯಾಗಿ ಮತ್ತೊಮ್ಮೆ ಸಿಎಂ ಆಗಲಿ ಬೇಡ ಎಂದವರಾರು? ಆದರೆ, ಅಲ್ಲಿಯವರೆಗೆ ಅವರು ರಾಜೀನಾಮೆ ಕೊಡಬೇಕು ಎಂದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ ನೀಡಿರುವ ಬಗ್ಗೆ ನಾನು ಹೆಚ್ಚಿನ ಸಮಾಲೋಚನೆ ಮಾಡಲ್ಲ. ಹೀಗಾಗಿ ಈ ವಿಷಯವಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.