ಕೊಪ್ಪ: ಆದಿವಾಸಿಗಳು, ಬುಡಕಟ್ಟು ಜನಾಂಗದವರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ನಾವು ಉಳಿಸಿಕೊಂಡು ಬಂದಿದ್ದ ಕಾಡು, ಗುಡ್ಡ, ಜಮೀನು, ಸಂಪತ್ತುಗಳನ್ನು ಸರ್ಕಾರ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆದಿವಾಸಿ ಸಮಾಗಮದ ಪ್ರಮುಖರಾದ ರಾಧಾ ಹಾಗಲಗಂಚಿ ಆರೋಪಿಸಿದರು.
ಆದಿವಾಸಿ ಸಮುದಾಯ, ಪ್ರಗತಿಪರ ಸಂಘಟನೆಗಳು ಭಾನುವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿ, ಅರಣ್ಯ ಕಾಯ್ದೆ, ಮೀಸಲು ಅರಣ್ಯ, ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ನಮಗೆ ಆತಂಕ ಮೂಡಿಸುತ್ತಿದ್ದಾರೆ. ಹಲವು ಹೋರಾಟಗಳು ನಮಗೆ ಯಶಸ್ಸು ನೀಡಿದೆ. ಆದ್ದರಿಂದ ನಾವು ನಮ್ಮ ಹಕ್ಕು ಪಡೆದುಕೊಳ್ಳಲು ಪ್ರತಿರೋಧ ತೋರಿಸಬೇಕು ಎಂದರು. ಹಲವು ಹಳ್ಳಿಗಳಲ್ಲಿ ಶಾಲೆ, ಅಂಗನವಾಡಿ, ವಿದ್ಯುತ್ ಸಂಪರ್ಕವಿಲ್ಲ. ಇಂಥ ಸ್ಥಿತಿಗೆ ಸರ್ಕಾರದ ಹಲವು ಯೋಜನೆಗಳೇ ಕಾರಣ. 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡುತ್ತಿಲ್ಲ. ಇದರ ಅರ್ಥ ಆದಿವಾಸಿ, ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸುವುದು. ಇದಕ್ಕೆ ಉತ್ತರ ನೀಡಲು ನಾವು ಒಗ್ಗಟ್ಟು ಪ್ರರ್ದಶನ ಮಾಡಬೇಕು. ಸರ್ಕಾರಕ್ಕೆ ಆದಿವಾಸಿ, ಬುಡಕಟ್ಟು ಜನರ ಶಕ್ತಿ ತೋರಿಸಬೇಕು ಎಂದು ಮನವಿ ಮಾಡಿದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮನಮೋಹನ್ ಸಿಂಗ್ ಪ್ರಧಾನಿಯಾಗುವ ಮೊದಲು ಅರಣ್ಯ ಇಲಾಖೆಯಿಂದ ಜನರಿಗೆ ಸಮಸ್ಯೆಯಾಗುತ್ತಿತ್ತು. ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸುವುದು, ಹೊಸ ಯಾವುದೇ ಕಾನೂನು ಜಾರಿಗೆ ತಂದು ಅರಣ್ಯ ವಾಸಿಗಳನ್ನು ಬೇರೆಡೆ ಸ್ಥಳಾಂತರ ಮಾಡಬಾರದು ಎಂದು 2006-07ರಲ್ಲಿ ಅವರು ಕಾನೂನು ರೂಪಿಸಿದರು ಎಂದು ಹೇಳಿದರು.ದೇಶದಲ್ಲಿ ಶಿಕ್ಷಣ ಪಡೆದು ಅಸಮಾನತೆ ಕಡಿಮೆಯಾಗುತ್ತಿದೆ. ಆದರೆ ಭಾವನಾತ್ಮಕವಾಗಿ ಮತ್ತು ಆಮಿಷಗಳಿಗೆ ಒಳಪಡಿಸುವ ರಾಜಕಾರಣ ನಡೆಯುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಹೋರಾಟಗಳು ನಡೆಯಬೇಕು. ಹೋರಾಟಗಳಿಂದ ಸುಧಾರಣೆ ಸಾಧ್ಯ. ಎಸ್ಸಿ, ಎಸ್ಟಿಗೆ ಮೀಸಲಿಟ್ಟ ಅನುದಾನವನ್ನು ಸರ್ಕಾರ ಉಚಿತ ಯೋಜನೆಗೆ ಬಳಕೆ ಮಾಡಿಲ್ಲ. ಬಳಸಿದ್ದರೂ ಅದು ತಾತ್ಕ್ಕಾಲಿಕ ಹೊಂದಾಣಿಕೆ ಅಷ್ಟೇ ಎಂದು ಹೇಳಿದರು.ಆದಿವಾಸಿ ರಕ್ಷಣಾ ಪರಿಷತ್‌ನ ಕೃಷ್ಣಪ್ಪ, ಆದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿಯ ಮರಿಯಪ್ಪ, ಪದ್ಮಾವತಿ, ಸುರೇಶ್ ಭಟ್, ಗೌಸ್ ಮೊಯಿದ್ದೀನ್, ಜಯಂತ್, ರಾಜು ಇತರರಿದ್ದರು.