ರಾಣೆಬೆನ್ನೂರ: ತಾಲೂಕಿನ ಇಟಗಿ ಗ್ರಾಮದಲ್ಲಿ ಸೋಮವಾರ ಒಂದೇ ದಿನ ನಾಲ್ವರು ಮೃತಪಟ್ಟಿದ್ದು, ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.
ನಾಲ್ವರಲ್ಲಿ 55 ವರ್ಷದ ಪುರುಷನೊಬ್ಬ ಕರೊನಾದಿಂದ ಮೃತಪಟ್ಟಿದ್ದಾನೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಅಲ್ಲದೆ 80 ವರ್ಷ ವೃದ್ಧ, 70 ಹಾಗೂ 71 ವರ್ಷದ ವೃದ್ಧೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಾವ ಸತ್ತ ಸುದ್ದಿ ಕೇಳಿ ಸೊಸೆ ಸಾವು: ಎರಡು ದಿನದ ಹಿಂದೆ 55 ವರ್ಷದ ಪುರುಷ ಕರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಈ ಸುದ್ದಿಯನ್ನು ಮರು ದಿನ ಕೇಳಿದ ಮೃತನ ಸೊಸೆ (ಸಹೋದರನ ಪತ್ನಿ) ಕುಳಿತಲ್ಲಿಯೇ ಜೀವ ಬಿಟ್ಟ ಘಟನೆ ನಡೆದಿದೆ. ಮೃತನ ಪುತ್ರ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದು, ಅವರಿಗೂ ಕರೊನಾ ಸೋಂಕು ತಗುಲಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ.
ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆದರೆ, ವೈದ್ಯರಿಲ್ಲ. ಒಬ್ಬರು ನರ್ಸ್ ಇದ್ದು, ಅವರೇ ಎಲ್ಲರಿಗೂ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಕೆಲವರಿಗೆ ಕರೊನಾ ಸೋಂಕು ತಗುಲಿದ್ದು, ಸರ್ಕಾರದಿಂದ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಗ್ರಾಪಂ ವತಿಯಿಂದ ಚರಂಡಿ ಸ್ವಚ್ಛಗೊಳಿಸಲಾಗಿದೆ. ಆದರೆ, ಸೋಂಕು ಇದ್ದ ಪ್ರದೇಶದಲ್ಲಿ ಯಾವುದೇ ಗುರುತು ಮಾಡಿಲ್ಲ. ಗ್ರಾಮಸ್ಥರಿಗೆ ವ್ಯಾಕ್ಸಿನ್ ಕೊಡುತ್ತಿಲ್ಲ. ಗ್ರಾಮದಲ್ಲಿ ಮೃತಪಡುತ್ತಿರುವವರ ಬಗ್ಗೆ ನಿಖರ ಕಾರಣ ತಿಳಿಯುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಆರೋಗ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇಟಗಿ ಗ್ರಾಮದಲ್ಲಿ ಸೋಮವಾರ ಕರೊನಾದಿಂದ 55 ವರ್ಷದ ಒಬ್ಬ ಪುರುಷ ಮೃತಪಟ್ಟಿದ್ದಾರೆ. ಇತರ ಮೂವರು ಬೇರೆ ಕಾಯಿಲೆ ಹಾಗೂ ವಯೋಸಹಜವಾಗಿ ಮೃತಪಟ್ಟಿದ್ದಾರೆ. ಆದರೆ, ಇತರ ಸಾವಿನ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು.| ಶಂಕರ ಜಿ.ಎಸ್., ತಹಸೀಲ್ದಾರ್