ಜಿಲ್ಲೆ

ಕಲಾವಿದನಿಗೆ ಅವಲೋಕನ, ಇತಿಹಾಸದ ಪ್ರಜ್ಞೆ ಅವಶ್ಯ: ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ

ಮೈಸೂರು: ಕಲಾವಿದನಿಗೆ ಹಿಂದಿನವರು ಸೃಷ್ಟಿಸಿದ ಕಲೆಯನ್ನು ಅವಲೋಕಿಸುವ ಜತೆಗೆ ಇತಿಹಾಸದ ಪ್ರಜ್ಞೆ ಇದ್ದಾಗ ಪರಿಪೂರ್ಣ ಕಲೆ ಹೊರಹೊಮ್ಮುತ್ತದೆ ಎಂದು ಹಿರಿಯ ದೃಶ್ಯಕಲಾ ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ ಹೇಳಿದರು.

ಮೈಸೂರು ದಸರಾ ಮಹೋತ್ಸವದ ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ, ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು(ಕಾವಾ)ದಿಂದ ಆಯೋಜಿಸಿರುವ ಟೆರಾಕೋಟಾ ಭಿತ್ತಿ ಶಿಲ್ಪಕಲಾ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಕಲಾಕೃತಿಗಳನ್ನು ಸೃಷ್ಟಿಸುವಾಗ ನಮಗಿಂತ ಮೊದಲು ಬೇರೆಯವರು ಸೃಷ್ಟಿಸಿರುವ ಕಲಾಕೃತಿಗಳನ್ನು ಪರಿಶೀಲನೆ ಮಾಡುವ ಸೂಕ್ಷ್ಮ ಅವಲೋಕನ ತುಂಬಾ ಮುಖ್ಯ. ಅಲ್ಲದೆ ಇತಿಹಾಸದ ಪ್ರಜ್ಞೆಯೂ ಇರಬೇಕು ಎಂದು ಹೇಳಿದರು.

ಕಲೆಯಲ್ಲಿ ಅವಸರ ಮಾಡಬಾರದು. ಕಲೆಯಲ್ಲಿ ಸಿಗುವ ಸಂತೋಷವನ್ನು ಅನುಭವಿಸಬೇಕಾದರೆ, ಕಲೆಯಲ್ಲೇ ಚೆನ್ನಾಗಿ ಬದುಕಬೇಕಾದರೆ ಅವಸರ ಎನ್ನುವ ಪದವನ್ನು ತೆಗೆದುಹಾಕಬೇಕು ಎಂದು ಸಲಹೆ ನೀಡಿದರು.

ಕಲೆಯಲ್ಲಿ ತಾಳ್ಮೆ ಇರಬೇಕು. ಮತ್ತೆ ಮತ್ತೆ ಓದಬೇಕು, ಬರೆಯಬೇಕು. ಆಗ ಮಾತ್ರ ಕಲೆಯಲ್ಲಿ ಒಂದು ಅದ್ಭುತ ಹಾಗೂ ಆಶ್ಚರ್ಯಕರವಾದ ಕಲಾಕೃತಿ ಸೃಷ್ಟಿಯಾಗುತ್ತದೆ ಎಂದರು.

ಕಲಾವಿದ ಹೊಗಳಿಕೆ ಹಾಗೂ ವಿಮರ್ಶೆ ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಹೊಗಳಿದಾಗ, ತೆಗಳಿದಾಗ ಅದನ್ನು ಯಾಕೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಆಗ ಉತ್ತಮ ಕಲೆ ಹೊರಬರಲು ಸಾಧ್ಯ ಎಂದರು.

ನಾವು ಏನೇ ಮಾಡಿದರೂ ಅದಕ್ಕೆ ಪ್ರಭಾವದ ಆತಂಕ ಇರುತ್ತದೆ. ನಾವು ಸೂರ್ಯನನ್ನು ಚಿತ್ರಿಸಿದರೆ, ಮಾತನಾಡಿದರೆ ಎಲ್ಲಿ ವ್ಯಂಗ್ಯವಾಗಿರುತ್ತದೆ ಎಂಬ ಆತಂಕ ಇರುತ್ತದೆ ಅಥವಾ ಎಲ್ಲಿ ಇದನ್ನು ಕಾಪಿ ಮಾಡಿರುತ್ತಾರೋ ಎಂದು ತಿಳಿದುಕೊಳ್ಳವ ಜನರ ಬಗ್ಗೆ ಆತಂಕವಿರುತ್ತದೆ. ನಕಲು ಮಾಡಿದರೆ ನಾವು ನೆನಪಾಗುವುದಿಲ್ಲ. ಹೀಗಾಗಿ ಜಾಣ ಕಲಾವಿದರಾಗಿ ನಮ್ಮದೇ ಆದ ಸ್ಪರ್ಶವನ್ನು ಕೊಡಲು ಪ್ರಯತ್ನಿಸಬೇಕು ಎಂದು ಹೇಳಿದರು.

ಬಾಹುಬಲಿಯನ್ನು ಚಿತ್ರಿಸಿದರೆ ಜನರಿಗೆ ಇದೇ ಬಾಹುಬಲಿ ಎಂದು ಹೇಳಬೇಕು. ಕಲಾವಿದರಿಗೆ ಇಂತಹ ಸ್ವಾತಂತ್ರೃ ಇದೆ. ನಾನು ಹೀಗೆ ಬಾಹುಬಲಿಯನ್ನು ನೋಡಿರೊದು ಎಂದು ಹೇಳುವ ಸ್ವಾತಂತ್ರೃ ಕಲಾವಿದರಿಗೆ ಇದೆ. ಜೀವನದಲ್ಲಿ ಯಾವುದರಲ್ಲಿ ಸ್ವಾತಂತ್ರೃ ಇರದೆ ಹೋದರೂ ಕಲಾವಿದರಿಗೆ ಪ್ರಶ್ನೆ ಮಾಡುವ ಸ್ವಾತಂತ್ರೃ ಇದೆ ಎಂದರು.

ಮೈಸೂರು ಶೈಲಿಯ ಪೇಟಿಂಗ್‌ಗಳಲ್ಲಿ ಬಹಳ ಜನರು ಕಾಪಿ ಮಾಡಿರುವ ಬಗ್ಗೆ ದೂರುತ್ತಾರೆ. ನಕಲೂ ಮಾಡುವುದು ನಿಜವಾದರೂ ಬಣ್ಣಗಳ ಸಂಯೋಜನೆಯಲ್ಲಿ, ರೂಪದಲ್ಲಿ ವ್ಯತ್ಯಾಸ ಇರುತ್ತದೆ. 50 ಜನ ಒಂದು ಪೇಟಿಂಗ್ ಮಾಡಿದರೆ ಒಂದೇ ರೀತಿ ಇರಲು ಸಾಧ್ಯವಿಲ್ಲ. ಹಲವು ರಸಭಾವಗಳು ಬೇರೆ ಇರುತ್ತದೆ ಎಂದರು.

ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಉಪವಿಶೇಷಾಧಿಕಾರಿ ಹಾಗೂ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ, ಕಾವಾ ಡೀನ್ ಎ.ದೇವರಾಜು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್, ಟೆರಾಕೋಟ ಭಿತ್ತಿ ಶಿಲ್ಪಕಲಾ ನಿರ್ದೇಶಕ ಉಲ್ಲಾಸ್ಕರ್ ಡೇ, ಕಾವಾ ಕಾಲೇಜಿನ ಆಡಳಿತಾಧಿಕಾರಿ ನಿರ್ಮಲಾ ಎಸ್. ಮಠಪತಿ, ಶಿಲ್ಪಕಲೆ ವಿಭಾಗದ ಮುಖ್ಯಸ್ಥರಾದ ಕೆ.ರಾಘವೇಂದ್ರ, ಕಾವಾ ಶೈಕ್ಷಣಿಕ ಸಂಯೋಜಕ ಎ.ಪಿ.ಚಂದ್ರಶೇಖರ್, ಶಿಲ್ಪಕಲಾ ಅಕಾಡೆಮಿ ಸದಸ್ಯ ಸಂಚಾಲಕ ವಿ.ಈ.ಅಕ್ಷಯ್‌ಕುಮಾರ್ ಇತರರು ಇದ್ದರು.

ಹಿರಿಯ ಶಿಲ್ಪಿಗಳಾದ ಬೆಂಗಳೂರಿನ ಗಣೇಶ್‌ಶೆರ್ಮಿ, ಕಲಬುರಗಿಯ ರುಕ್ಕಪ್ಪಾ ಕುಂಬಾರ, ಬೆಳಗಾವಿಯ ವಿಠಲ್ ದೇವೇಂದ್ರಗವಿ, ಮೈಸೂರಿನ ಸಿ.ಎನ್.ವಿಜಯಕುಮಾರ್, ಚಾಮರಾಜನಗರದ ಮಹದೇವಸ್ವಾಮಿ, ಬೆಂಗಳೂರಿನ ವಿನ್ಯಾಸ್ ಕಾಟೇನಹಳ್ಳಿ ಅವರು ಶಿಬಿರದಲ್ಲಿ ಭಾಗವಹಿಸಲಿದ್ದು, ಸೆ.2ರಿಂದ 8 ಹಾಗೂ ಸೆ.22ರಿಂದ 28ರ ವರೆಗೆ ಆಯೋಜಿಸಲಾಗಿದೆ.