ಜಿಲ್ಲೆ

ಕಲಾವಿದರಿಗೆ ಸಿಗದ ಕಲಾಭವನ

Dharwada - Vikram Nadiger

ವಿಕ್ರಮ ನಾಡಿಗೇರ ಧಾರವಾಡ
ಸರ್ಕಾರದ ಹಣ ಪೋಲಾಗದಂತೆ ಎಚ್ಚರ ವಹಿಸಿ ಎಂದು ಮಂತ್ರಿ ಮಹೋದಯರು ಸಭೆ, ಸಮಾರಂಭಗಳಲ್ಲಿ ಸದಾ ಹೇಳುತ್ತಿರುತ್ತಾರೆ. ಆದರೆ ಅಧಿಕಾರಿಗಳು ಮಾತ್ರ ಈ ಮಾತು ತಮಗಲ್ಲ ಎಂದುಕೊಳ್ಳುತ್ತಾರೆ. ಇದಕ್ಕೆ ನಗರದ ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನವೇ ಸಾಕ್ಷಿ.
ಸುಮಾರು 4 ವರ್ಷಗಳ ಹಿಂದೆ ಪಾಲಿಕೆಯ 100 ಕೋಟಿ ರೂ. ವಿಶೇಷ ಅನುದಾನ ಅಡಿ ಅಂದಾಜು 5.36 ಕೋಟಿ ರೂ. ವ್ಯಯಿಸಿ ಕಲಾಭವನ ನವೀಕರಣ ಕಾರ್ಯ ನಡೆಸಲಾಗಿತ್ತು. ನಿರ್ಮಿತಿ ಕೇಂದ್ರಕ್ಕೆ ಈ ಕಾರ್ಯ ವಹಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡ ಕೆಲ ವರ್ಷಗಳಲ್ಲೇ ಫಾಲ್ ಸೀಲಿಂಗ್ ಕಳಚಿ ಬಿದ್ದಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈ ಗನ್ನಡಿಯಾಗಿದೆ.
ನವೀಕರಣವಾದ ಬಳಿಕ ನಿರ್ಮಿತಿ ಕೇಂದ್ರದಿಂದ ಪಾಲಿಕೆಗೆ ಅಧಿಕೃತವಾಗಿ ಹಸ್ತಾರವಾಗದಿರುವುದು ಒಂದೆಡೆಯಾದರೆ, ಭಾಡಿಗೆ ಹೆಚ್ಚಳ ಮಾಡಿದ್ದರಿಂದ ಕೆಲ ಸಮಯ ಸರ್ಕಾರಿ ಸಭೆ, ಸಮಾರಂಭಗಳಿಗೆ ಮಾತ್ರ ಸೀಮಿತವಾಗಿತ್ತು. 2019ರಲ್ಲಿ ಸುರಿದ ವಿಪರೀತ ಮಳೆಯಿಂದ ನೀರು ಸೂರಿಕೆಯಾಗಿ ಅಲಂಕಾರಿಕ ಪ್ಲೇಟ್‌ಗಳು, ವೈರಿಂಗ್ ಸಂಪೂರ್ಣ ಕಳಚಿ ಬಿದ್ದ ಕಾರಣ ಇದೀಗ ಭವನ ಉಪಯೋಗಕ್ಕೆ ಬಾರದಂತಾಗಿದೆ.
ಗುತ್ತಿಗೆದಾರ ಸರಿಯಾದ ಕಾಮಗಾರಿ ಮಾಡದ ಕಾರಣ ಸಂಪೂರ್ಣ ಹಣ ಪಾವತಿ ಸಹ ಮಾಡಿರಲಿಲ್ಲ. ಇದೇ ಕಾರಣಕ್ಕೆ ಗುತ್ತಿಗೆದಾರರು ಭವನದ ಕೆಲ ವಸ್ತುಗಳನ್ನು ತನ್ನ ಸುಪರ್ದಿಯಲ್ಲೇ ಇಟ್ಟುಕೊಂಡಿದ್ದರು. ಇದರ ನಡುವೆಯೂ ಸರ್ಕಾರಿ ಕಾರ್ಯಕ್ರಮಗಳನ್ನು ಮಾತ್ರ ಕಲಾಭವನದಲ್ಲಿ ನಡೆಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಹಾಳಾಗಿ ಯಾವ ಕಾರ್ಯಕ್ರಮವೂ ನಡೆಸದಂತಾಗಿದೆ.
ನಗರದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಕಾರಣಕ್ಕೆ ಭವನವನ್ನು ಸುಸಜ್ಜಿತಗೊಳಿಸಿ ನವೀಕರಿಸುವ ಬೇಡಿಕೆ ಇತ್ತು. ಕಲಾವಿದರ ಹಾಗೂ ಜನರ ಬೇಡಿಕೆಯಂತೆ ಭವನ ಕೊನೆಗೂ ನವೀಕರಣಗೊಂಡಿತು. ಆದರೆ ಯಾವ ಸಮಾರಂಭಗಳಿಗೂ ಉಪಯೋಗಕ್ಕೆ ಬಾರದಂತಾಗಿದೆ. ಪಾಲಿಕೆ ತನ್ನ ಸುಪರ್ದಿಗೆ ಪಡೆಯದ ಕಾರಣ ನಿರ್ವಹಣೆಗೆ ಯಾರನ್ನೂ ನೇಮಿಸಿಲ್ಲ. ಇದರಿಂದ ಸುಸಜ್ಜಿತವಾಗಿ ಕಂಗೊಳಿಸಿದ್ದ ಭವನ ಮತ್ತದೆ ಸ್ಥಿತಿಗೆ ತಲುಪುತ್ತದೆಯೇ ಎಂಬ ಪ್ರಶ್ನೆ ಕಲಾವಿದರನ್ನು ಮಾತ್ರವಲ್ಲದೇ, ಜನರನ್ನು ಕಾಡುತ್ತಿದೆ.
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಗುತ್ತಿಗೆದಾರ ಹಾಗೂ ಮಹಾನಗರ ಪಾಲಿಕೆ ಮುಸುಕಿನ ಗುದ್ದಾಟದಲ್ಲಿ ಕಲಾಭವನ ಬಡವಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇನ್ನಾದರೂ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುವರೇ ಕಾದು ನೋಡಬೇಕು.
ಉದಯ ಯಂಡಿಗೇರಿ, ವ್ಯಾಪಾರಸ್ಥ.

ಈ ಹಿಂದೆ ನಡೆಸಿದ ಕಾಮಗಾರಿಯ ಬಾಕಿ ಹಣ ಪಾಲಿಕೆ ಬಳಿಯೇ ಇದೆ. ಅದೇ ಹಣದಲ್ಲಿ ಮೇಲ್ಛಾವಣಿ, ಸೌಂಡ್ ಸಿಸ್ಟಂ ಹಾಗೂ ಎಸಿ ದುರಸ್ತಿ ಕಾರ್ಯ ನಡೆಸುವ ಚಿಂತನೆ ಮಾಡಲಾಗುವುದು. ಕೂಡಲೇ ಅಂದಾಜು ವೆಚ್ಚ ತಯಾರಿಸಿ ಕಾಮಗಾರಿ ನಡೆಸಲಾಗುವುದು. ಶಂಕರ ಪಾಟೀಲ, ಸಹಾಯಕ ಆಯುಕ್ತ, ವಲಯ ಕಚೇರಿ 3