ಬೆಂಗಳೂರು ಗ್ರಾಮಾಂತರ: ನಾಗರಿಕರಿಗೆ ನಿಗದಿತ ಕಾಲ ಮಿತಿಯಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಸಕಾಲ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದ್ದು, ಸಕಾರಣವಿಲ್ಲದೇ ಯಾವುದೇ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ ಎಂದು ಸಕಾಲ ಮಿಷನ್‌ನ ಅಪರ ನಿರ್ದೇಶಕಿ ಡಾ.ಬಿ.ಆರ್.ಮಮತಾ ಸೂಚಿಸಿದರು.
ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಕಾಲ ಸಪ್ತಾಹ ಆಂದೋಲನ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸಕಾಲದಡಿ ಬರುವ ವಿವಿಧ ಇಲಾಖೆಗಳ 1,025 ಸೇವೆಗಳ ಕುರಿತು ಆಯಾ ಇಲಾಖೆಗಳು ಕಡ್ಡಾಯವಾಗಿ ಸೇವೆಗಳು ಹಾಗೂ ವಿಲೇವಾರಿ ಸಮಯದ ಮಾಹಿತಿಯುಳ್ಳ ನಾಮಫಲಕಗಳನ್ನು ಕಚೇರಿಗಳಲ್ಲಿ ಅಳವಡಿಸಬೇಕು. ಪ್ರತಿ ಕಚೇರಿಯಲ್ಲಿ ಸಪ್ತಾಹದ ಬ್ಯಾನರ್ ಅಳವಡಿಸಬೇಕು. ಕಚೇರಿಯ ಪ್ರವೇಶ ದ್ವಾರದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿ ಜನರಿಗೆ ಸಕಾಲ ಯೋಜನೆ ಕುರಿತು ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.
ಸಕಾಲದ ಮಾಹಿತಿಯುಳ್ಳ ಫಲಕಗಳಲ್ಲಿ ದಾಖಲೆಗಳ ಮಾಹಿತಿ ಪ್ರದರ್ಶಿಸುವುದರಿಂದ ಅರ್ಜಿದಾರರಿಗೆ ಸೇವೆಗಳು ಲಭ್ಯವಾಗಲು ಸಹಕಾರಿಯಾಗಲಿದೆ ಎಂದರು.
ಪ್ರತಿ ಸೋಮವಾರ ಜಿಲ್ಲಾಮಟ್ಟದಲ್ಲಿ ಹಾಗೂ ಪ್ರತಿ ಶನಿವಾರ ತಾಲೂಕುಮಟ್ಟದಲ್ಲಿ ಸಕಾಲದ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸುವಂತೆ ಸೂಚಿಸಿದರು. ಸಕಾಲ ಸಪ್ತಾಹದ ಅವಧಿಯಲ್ಲಿ ಬಾಕಿ ಉಳಿದಿರುವ ಅರ್ಜಿಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ಸಪ್ತಾಹದಲ್ಲಿ ಹೊಸ ಅರ್ಜಿ ಸ್ವೀಕಾರ, ವಿಲೇವಾರಿ ಒಳಗೊಂಡಂತೆ ಅವಧಿ ಮೀರಿ ಬಾಕಿ ಉಳಿಸಿಕೊಂಡ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ತಿಳಿಸಿದರು.
ನಾಡಕಚೇರಿಯ ಸರ್ವೇ ವಿಭಾಗದಲ್ಲಿ ಹೆಚ್ಚು ಅರ್ಜಿಗಳು ಬಾಕಿ ಇದ್ದು, ಹೊಸಕೋಟೆಯಲ್ಲಿ ಶೇ. 33 ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಶೇ.20 ಹಾಗೂ ನೆಲಮಂಗಲ ಶೇ. 15 ಅರ್ಜಿಗಳು ತಿರಸ್ಕೃತಗೊಂಡಿರುವುದರಿಂದ ರಾಜ್ಯದಲ್ಲಿ ಜಿಲ್ಲೆ ಶ್ರೇಣಿಯಲ್ಲಿ ಕೆಳಗಿಳಿಯಲು ಕಾರಣವಾಗಿದೆ ಎಂದರು.
ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆಗಳ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಸಕಾಲದ ಕಾರ್ಯವೈಖರಿ ಕುರಿತು ನಾಡ ಕಚೇರಿ ಸಿಬ್ಬಂದಿ, ಕೇಸ್‌ವರ್ಕರ್‌ಗಳಿಗೆ ತರಬೇತಿ ಅಗತ್ಯವಿದ್ದಲ್ಲಿ ಆನ್‌ಲೈನ್ ಮೂಲಕ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪಿ. ಎನ್.ರವೀಂದ್ರ ಮಾತನಾಡಿ, ಜಿಲ್ಲೆಯಲ್ಲಿ ಕೈಗೊಂಡಿರುವ ಸಕಾಲದ ಕಾರ್ಯವೈಖರಿ ಕುರಿತು ಈಗಾಗಲೇ ವಿಮರ್ಶಿಸಲಾಗಿದ್ದು, ತಹಸೀಲ್ದಾರ್‌ಗಳು ಇನ್ನೂ ಹೆಚ್ಚಿನ ನಿಗಾವಹಿಸಿ ಕಾರ್ಯನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ ಮಾತನಾಡಿ, ಸಕಾಲದಡಿ ಅರ್ಜಿ ಸಲ್ಲಿಸುವುದರಿಂದ ಸಮಯದ ಉಳಿತಾಯದ ಜತೆಗೆ ಅರ್ಜಿಗಳ ಶೀಘ್ರ ವಿಲೇವಾರಿಗೂ ಸಹಾಯವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಸುಮಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಎನ್.ಎಸ್.ಮಹೇಶ್ ಮತ್ತಿತರರಿದ್ದರು.