ಜಿಲ್ಲೆ

ಅಮೆರಿಕ ದಂಪತಿ ಮಡಿಲು ಸೇರಿದ ಮಗು

Gadag

ಗದಗ: ಬೆಟಗೇರಿಯ ಸೇವಾ ಭಾರತಿ ಟ್ರಸ್ಟ್​ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಶನಿವಾರ ಮನಮಿಡಿಯುವ ದೃಶ್ಯ ಕಂಡುಬಂದಿತು. ಸಂಸ್ಥೆಯ ಪೋಷಣೆಯಲ್ಲಿದ್ದ ಗಂಡು ಮಗುವನ್ನು ದತ್ತು ಪೂರ್ವ ಪೋಷಕತ್ವಕ್ಕಾಗಿ ಅಮೆರಿಕದ ರಾಬರ್ಟ್ ಮತ್ತು ಚೇಲ್ಸಿ ದಂಪತಿಗೆ ಹಸ್ತಾಂತರಿಸಲಾಯಿತು.

ಇನ್ನು ಮೂರು ತಿಂಗಳು ಕಾಲ ಈ ಮಗು ಈ ದಂಪತಿಯೊಂದಿಗೆ ಭಾರತದಲ್ಲಿಯೇ ಇರಲಿದೆ. ಮೂರು ತಿಂಗಳ ಅವಧಿಯಲ್ಲಿ ಮಗು ಈ ದಂಪತಿಯೊಂದಿಗೆ ಉತ್ತಮ ಹೊಂದಾಣಿಕೆಯಿಂದ ಇದ್ದರೆ ನಂತರ ದತ್ತು ಕಾರ್ಯ ನಡೆಸಲಾಗುವುದು. ನಂತರವಷ್ಟೇ ದಂಪತಿ ಮಗುವನ್ನು ಅಮೆರಿಕಕ್ಕೆ ಕರೆದೊಯ್ಯಬಹುದಾಗಿದೆ

ಕಾರ್ಯಕ್ರಮಕ್ಕೆ ಸಾಕ್ಷಿಯಾದ ಶಿವಾನಂದ ಮಠದ ಸದಾಶಿವಾನಂದ ಸ್ವಾಮೀಜಿ ಮಾತನಾಡಿ, ಭಾರತ ವಿಶ್ವಮಾನವತ್ವವನ್ನು ಸಾರಿದ ದೇಶ. ಭಾರತೀಯ ಸಂಸ್ಕೃತಿಗೆ ತನ್ನದೆ ಆದ ಭವ್ಯ ಇತಿಹಾಸವಿದೆ. ಮನುಷ್ಯತ್ವ ಮತ್ತು ಮಾನವೀಯತೆಗೆ ಒತ್ತು ನೀಡುವ ಮೂಲಕ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಿಬೆಳೆಸಿಕೊಂಡು ಬಂದಿದೆ ಎಂದು ಹೇಳಿದರು.

ಭಾರತದ ಪ್ರಜೆಯಾಗಿದ್ದ ಈ ಮಗು ಮುಂದಿನ ದಿನಗಳಲ್ಲಿ ಅಮೆರಿಕದ ಪ್ರಜೆಯಾಗಿ ಬೆಳಗಲಿ. ಆ ಮೂಲಕ ಭಾರತೀಯ ಸಂಸ್ಕೃತಿ ಅಲ್ಲಿಯೂ ಪಸರಿಸುವಂತಾಗಲಿ. ದೇಶ, ಭಾಷೆ, ಗಡಿಯ ಭಾವನೆಯನ್ನು ಮೀರಿದ ವಿಶಾಲ ಮನೋಭಾವವನ್ನು ಈ ಪಾಲಕರು ಮಗುವಿಗೆ ನೀಡಲಿ ಎಂದರು.

ಸಿಂಗಟಾಲೂರಿನ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಸಮಿತಿಯ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಮಾತನಾಡಿ, ಇದು ಮನ ಮಿಡಿಯುವ ಮಾನವೀಯತೆಯ ಕಾರ್ಯಕ್ರಮವಾಗಿದೆ. ಗದಗನಿಂದ ಅಮೆರಿಕಕ್ಕೆ ತೆರಳುತ್ತಿರುವ ಮಗುವಿನ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವಿನಾಶ ಗೋಟಖಿಂಡಿ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಆರ್.ಸಿ. ಹುಣಸೀಮರದ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಹುಬ್ಬಳ್ಳಿಯ ಸೇವಾಭಾರತಿ ಟ್ರಸ್ಟ್ ಕಾರ್ಯದರ್ಶಿ ಗೋವರ್ಧನ ರಾವ್, ಸದಸ್ಯರಾದ ಚಂದ್ರಕಾಂತ ಗೋಕಾಕ ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ಸುಭಾಸ ಬಬಲಾದಿ ನಿರೂಪಿಸಿದರು. ಮಂಜುನಾಥ ಚನ್ನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸ್ಥೆಯ ಕೋಶಾಧ್ಯಕ್ಷ ಶ್ರೀಧರ ಉಡುಪಿ, ಸದಸ್ಯರಾದ ನಾಗವೇಣಿ ಕಟ್ಟಿಮನಿ, ಲಲಿತಾಬಾಯಿ ಮೇರವಾಡೆ, ಪ್ರಲ್ಹಾದರಾಜ್ ಕಾರ್ಕಳ, ರಾಜೇಶ ಖಟವಟೆ, ಲಲಿತವ್ವ ಚನ್ನಪ್ಪನವರ, ಮಾಧುಸಾ ಮೇರವಾಡೆ, ಚನ್ನಯ್ಯ ಬೊಮ್ಮನಳ್ಳಿ, ಚೇತನ ಮೇರವಾಡೆ, ಗುರುಸಿದ್ದಪ್ಪ ಕೊಣ್ಣೂರು, ರಾಘವೇಂದ್ರ ಹಬೀಬ, ಬೂದೇಶ ಹೊಸಳ್ಳಿ ಇದ್ದರು.

ಮಗುವಿಗೆ ಒಳ್ಳೆಯ ಸಂಸ್ಕಾರ ನೀಡಿ

ಮಗುವಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯೊಂದಿಗೆ ಅತ್ಯುತ್ತಮ ಶಿಕ್ಷಣ ನೀಡಿ ಉತ್ತಮ ಭವಿಷ್ಯವನ್ನು ನೀಡಬೇಕು. ಮಗುವಿನೊಂದಿಗೆ ಆಗಾಗ ಭಾರತಕ್ಕೆ ಭೇಟಿ ನೀಡಿ ಇಲ್ಲಿನ ಆಚಾರ-ವಿಚಾರಗಳು, ಹಬ್ಬ ಹರಿದಿನಗಳು, ಸಂಸ್ಕೃತಿ ಅರಿತುಕೊಳ್ಳುವ ಜತೆಗೆ ಮಗುವಿಗೆ ಭಾರತೀಯ ಸಂಸ್ಕೃತಿಯನ್ನು ತಿಳಿಸಬೇಕೆಂದು ಶಿವಾನಂದ ಮಠದ ಸದಾಶಿವಾನಂದ ಸ್ವಾಮೀಜಿ ಮಗುವನ್ನು ದತ್ತು ಪಡೆದ ದಂಪತಿಗೆ ಸಲಹೆ ನೀಡಿದರು.