ಗೋಕರ್ಣ: ಬದುಕು ಸೇರಿದಂತೆ ಪ್ರತಿಯೊಂದಕ್ಕೂ ಚೌಕಟ್ಟು ಇರಲೇಬೇಕು. ಚೌಕಟ್ಟಿಲ್ಲದೆ ಬೋಳುಬೋಳಾದ ಯಾವುದೂ ಶೋಭಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಚೌಕಟ್ಟು ಸಾರ್ವತ್ರಿಕವಾಗಿ ಸರ್ವತ್ರ ಶೋಭಾಯಮಾನವಾದುದು ಎಂದು 31ನೇ ಅನಾವರಣ ಚಾತುರ್ವಸ್ಯ ವ್ರತ ನಿರತ ಶ್ರೀರಾಘವೇಶ್ವರ ಭಾರತೀ ಅವರು ಆಶೀರ್ವದಿಸಿದರು.
ವ್ಯಾಪ್ತಿಯ ಮಿತಿಯನ್ನು ಮೀರದಿರಲು ಪ್ರತಿಯೊಬ್ಬರ ಬದುಕಿಗೆ ಚೌಕಟ್ಟು ಬೇಕು. ಚೌಕಟ್ಟನ್ನು ದಾಟುವ ಬದುಕು ತಂಟೆಗೆ, ಕಲಹಕ್ಕೆ, ತೊಡಕಿಗೆ ಈಡಾಗುತ್ತದೆ. ಕಲಾವಿದ ರಚಿಸಿದ ಚಿತ್ರ ಅದೆಷ್ಟೇ ಸುಂದರವಾಗಿದ್ದರೂ ಅದಕ್ಕೊಂದು ಚೌಕಟ್ಟು ಇಲ್ಲದಿದ್ದರೆ ಆಕರ್ಷಿತವಾಗುವುದಿಲ್ಲ. ಅಂತೆಯೇ ನಾರಿಯರ ಪ್ರಿಯ ಸೀರೆಗೆ ಚೌಕಟ್ಟು ಇಲ್ಲದಿದ್ದರೆ ಅದು ಅಂದಗೇಡಾಗುತ್ತದೆ. ವಿವಾಹಿತಳಾಗಿ ಮನೆಗೆ ಬಂದು ಗೃಹೋಚ್ಛಗೊಳಿಸುವ ಗೃಹಣಿಗೂ ಚೌಕಟ್ಟಿನ ವ್ಯಾಪ್ತಿಯಿದೆ. ಚೌಕಟ್ಟಿನ ಹೊಸಿಲೊಳಗೆ ಗೃಹಣಿಯಿದ್ದರೆ ಮನೆ ಬೆಳಗುತ್ತದೆ. ಇಲ್ಲವಾದಲ್ಲಿ ಮನೆ ಉರಿಯುತ್ತದೆ. ಇದೇ ತೆರನಾಗಿ ಮಠಕ್ಕೆ ಹೇಗೆ ನಿಗದಿತ ನೀತಿ-ನೇಮಗಳ ಚೌಕಟ್ಟಿದೆಯೋ ಹಾಗೆಯೇ ಮಠದ ಶಿಷ್ಯಭಕ್ತರಿಗೂ ಒಂದು ಚೌಕಟ್ಟಿದೆ. ಇಂತಹದೇ ಅನುಪಮವಾದ ಚೌಕಟ್ಟನ್ನು ನಿರ್ವಿುಸುವ ಕಾಷ್ಠಶಿಲ್ಪಿಗಳಾದ ಕೊಂಕಣಾಜೆ ಶಂಕರ ನಾರಾಯಣ ಭಟ್ಟರ ತಾಂತ್ರಿಕ ಮತ್ತು ಬೌದ್ಧಿಕ ಕಲಾ ಆಯಾಮಗಳ ವಿಶೇಷತೆಯ ಅನಾವರಣ ನಡೆದಿದೆ. ಇವರದು ಮರಕೆತ್ತುವ ಕೈ ಆದರೂ ಅದು ಚಿನ್ನದ ಕೈ. ಶ್ರೀಮಠಕ್ಕೆ ಪೂರ್ಣ ನಿಷ್ಠವಾಗಿರುವ ಇವರ ಇಡೀ ಕುಟುಂಬ ಈ ಶಿಲ್ಪಕಲಾ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವುದು ದಾಖಲಾರ್ಹವಾದುದು. ಇಂತಹ ಕುಟುಂಬದಿಂದ ಇನ್ನೂ ಉತ್ತಮೋತ್ತಮವಾದ ಕಲಾಕೃತಿಗಳ ಅನಾವರಣವಾಗಲಿ. ಇಂತಹ ಶಿಲ್ಪಕಲಾವಿದರ ಅನಾವರಣ ಶ್ರೀಮಠದ ಹಿರಿಯ ಗುರಿಕ್ಕಾರ ಮುದ್ರಜೆ ಗೋವಿಂದ ಭಟ್ಟರಿಂದ ನೆರವೇರಿರುವುದು ಮಹತ್ವ ಪೂರ್ಣವಾದುದು ಎಂದರು.
ಉಪ್ಪನಂಗಡಿ ಮಂಡಲದ ಶಿಷ್ಯರು ಶ್ರೀಮಠದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಷಡ್-ರಸಗಳಲ್ಲಿ ಉಪ್ಪಿಗೆ ಎಷ್ಟು ಪ್ರಾಧಾನ್ಯವೋ ಅದೇ ಮಹತ್ವ ಈ ಮಂಡಲಕ್ಕಿದೆ. ಸೇವೆಯಲ್ಲಿ ಸಂಪತ್ತು ಮತ್ತು ಸಮಯ ಅತ್ಯಂತ ಗಣನೀಯವಾದುದು. ಇವೆರಡನ್ನೂ ಈ ಮಂಡಲ ಅನವರತ ಸಮರ್ಪಿಸುತ್ತ ಬಂದಿದೆ. ಮಂಡಲದ ಸರ್ವ ಶಿಷ್ಯರು ಇನ್ನೂ ಹೆಚ್ಚು ಹೆಚ್ಚು ಮಠಕ್ಕೆ ಬಂದು ಸೇವಾಭಾಗಿಗಳಾಗುವಂತಾಗಲಿ ಎಂದು ರಾಘವೇಶ್ವರ ಶ್ರೀಗಳು ಹರಸಿದರು.
ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ ಕುದುಪುಲು, ವಿವಿವಿ ಪ್ರಾಂತ ಉಪಾಧ್ಯಕ್ಷ ಪರಮೇಶ್ವರ ಭಟ್ಟ, ವಿವಿವಿ ಮಂಡಲಾಧ್ಯಕ್ಷೆ ಶೈಲಜಾ ಕೆ.ಟಿ., ಕಾರ್ಯದರ್ಶಿ ಶ್ರೀಧರ ಭಟ್ಟ, ಚಾತುರ್ವಸ್ಯ ಸಮಿತಿಯ ಶ್ರೀಕಾಂತ ಪಂಡಿತ, ಸುಧಾಕರ ಬಡಗಣಿ, ಹವ್ಯಕ ಮಹಾಮಂಡಲ ಪ್ರ. ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು ಮತ್ತಿತರರಿದ್ದರು .ಕಾರ್ಯಕ್ರಮವನ್ನು ಈಶ್ವರ ಭಟ್ಟ ನಿರ್ವಹಿಸಿದರು.