ಜಿಲ್ಲೆ

ಅಂಕೋಲಾ ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನಕ್ಕೆ ಹೆಚ್ಚುವರಿ 11 ಕೋಟಿ ರೂ. ಶೀಘ್ರ ಬಿಡುಗಡೆ

ಕಾರವಾರ: ಅಂಕೋಲಾ ವಿಮಾನ ನಿಲ್ದಾಣದ ಭೂ ಸ್ವಾಧೀನದ ಹೆಚ್ಚುವರಿ ಪರಿಹಾರಕ್ಕೆ 11 ಕೋಟಿ ರೂ.ನೀಡಲು ಸಿಎಂ ಸಿದ್ದರಾಮಯ್ಯ ಒಪ್ಪಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯಲಿದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.
ಅಂಕೋಲಾ ವಿಮಾನ ನಿಲ್ದಾಣಕ್ಕೆ 73 ಎಕರೆ ಭೂಸ್ವಾಧಿನವಾಗಲಿದೆ. ಅದಕ್ಕಾಗಿ ಜಮೀನು ಕಳೆದುಕೊಳ್ಳುವರಿಗೆ ಹೆಚ್ಚುವರಿ ಪರಿಹಾರಕ್ಕೆ ಮನವಿ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ ಅವರ ಜತೆ ಈ ಹಿಂದೆ ಸಭೆ ನಡೆದಿದ್ದರೂ ಅನುದಾನ ಬಿಡುಗಡೆಗೆಯಾಗಿರಲಿಲ್ಲ. ಭಾನುವಾರ ಜಿಲ್ಲೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆಯಾಗಿದ್ದು, ಅವರು ಹಣ ಬಿಡುಗಡೆಗೆ ಒಪ್ಪಿದ್ದಾರೆ ಅಲ್ಲದೇ, ನಿರಾಶ್ರಿತರಿಗೆ ತಲಾ 40*60 ಅಳತೆಯ ನಿವೇಶನ ನೀಡಲು ಒಪ್ಪಿಗೆ ಸಿಕ್ಕಿದೆ ಎಂದರು.
ಕರಾವಳಿಯ ಸಮುದ್ರ ಕೊರೆತ ತಡೆಗೆ 20 ಕೋಟಿ ರೂ. ಹಾಗೂ ಬಿಡುಗಡೆಗೆ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಭಾನುವಾರ ಅಂಕೋಲಾ ಹಾರವಾಡ ತರಂಗ ಮೇಟ್ ಸಮುದ್ರ ಕೊರೆತ ಪ್ರದೇಶ ವೀಕ್ಷಿಸಿದ್ದು, ಅದಕ್ಕೆ ಪರಿಹಾರಕ್ಕೆ ಹಣ ಬಿಡುಗಡೆಗೆ ಸೂಚಿಸಿದ್ದಾರೆ. ಅಲ್ಲಿಯವರೆಗೆ ಸ್ಥಳೀಯರನ್ನು ಸ್ಥಳಾಂತರಿಸುವಂತೆ ತಹಸೀಲ್ದಾರ್‌ಗೆ ಆದೇಶಿಸಿದ್ದಾರೆ ಎಂದರು.
ಶಿರೂರು ಗುಡ್ಡ ಕುಸಿತ ಸ್ಥಳವನ್ನು ಜಿಎಸ್‌ಐ ಸೂಕ್ಷ್ಮ ಪ್ರದೇಶ ಎಂದು ಈ ಹಿಂದೆಯೇ ಘೋಷಿಸಿದೆ. ಆದರೆ, ಜಿಲ್ಲಾಡಳಿತ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಂದೆ ಸೂಕ್ಷ್ಮ ಪ್ರದೇಶಗಳಲ್ಲಿ ಅವಗಢ ಸಂಭವಿದಂತೆ ಕ್ರಮ ವಹಿಸಲು ಸಿಎಂ ಸೂಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕೆಡಿಪಿ ಸಭೆಯಲ್ಲಿ ಹಾಜರಿರಲು ಆದೇಶಿಸಿದ್ದಾರೆ ಎಂದು ವಿವರಿಸಿದರು.

ಪರಿಹಾರ ವಿತರಣೆ
ನನ್ನ ಮನವಿಯಂತೆ ರೆಡ್ ಕ್ರಾಸ್ ಸಂಸ್ಥೆಯಿಂದ ಶಿರೂರು ಸಂತ್ರಸ್ತರಿಗೆ ತಲಾ 10 ಸಾವಿರ ರೂ. ಮೊತ್ತದ ಪರಿಹಾರ ಕಿಟ್‌ಗಳು ಬರುತ್ತಿದ್ದು, ಅದನ್ನು ವಿತರಿಸಲಾಗುವುದು. ಸರ್ಕಾರದಿಂದ ಬರುವ ಎಲ್ಲ ಪರಿಹಾರ ಒದಗಿಸುವ ಕಾರ್ಯ ನಡೆದಿದೆ ಎಂದು ಸತೀಶ ಸೈಲ್ ತಿಳಿಸಿದರು.


ಆಂಬುಲೆನ್ಸ್ ಉದ್ಘಾಟನೆ:

ಜಿಲ್ಲೆಯ ಕಾರವಾರ, ಬನವಾಸಿ, ಮುರ್ಡೇಶ್ವರ, ರಾಮನಗುಳಿ, ಗೋಕರ್ಣ, ರಾಮನಗರಕ್ಕೆ ಹೊಸ 108 ಆರೋಗ್ಯ ಕವಚ ಆಂಬುಲೆನ್ಸ್ಗಳನ್ನು ಸರ್ಕಾರ ಒದಗಿಸಿದೆ. ಹಳೆಯ ಆಂಬುಲೆನ್ಸ್ಗಳು ಹಾಳಾಗಿದ್ದವು. ಓಡಾಟಕ್ಕೆ ಸಮಸ್ಯೆಯಾಗುತ್ತಿತ್ತು. ಈಗ ವೆಂಟಿಲೇಟರ್ ಇರುವ ಹೊಸ ಆಂಬುಲೆನ್ಸ್ಗಳು ಸೇವೆಗೆ ಲಭ್ಯವಿವೆ. ಕಾರವಾರಕ್ಕೆ ಮಂಜೂರಾದ ಆಂಬುಲೆನ್ಸ್ ಓಡಾಟಕ್ಕೆ ಶಾಸಕ ಸತೀಶ ಸೈಲ್ ಸೋಮವಾರ ಚಾಲನೆ ನೀಡಿದರು.