ಗುಳೇದಗುಡ್ಡ: ಅಷ್ಟಾವರ್ಣ, ಪಂಚಾಚಾರ್ಯ, ಷಟಸ್ಥಲ ಸಿದ್ಧಾಂತವನ್ನು ಅನುಸರಿಸಿಕೊಂಡು ಹೋಗಲು ಹಾನಗಲ್ ಕುಮಾರ ಮಹಾಸ್ವಾಮಿಗಳು ಅಖಿಲ ಭಾರತೀಯ ವೀರಶೈವ ಲಿಂಗಾಯತ ಸಂಸ್ಥೆ ಸ್ಥಾಪನೆ ಮಾಡಿದರು. ಇತ್ತೀಚಿನ ದಿನಗಳಲ್ಲಿ ಸ್ವಯಂ ಘೋಷಿತ ಬುದ್ಧಿಜೀವಿಗಳು, ಕೆಲವು ಮಠಾಧೀಶರು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ರಚಿಸಿ ಪರಂಪರೆ, ಸನಾತನವಾಗಿ ಬಂದಿರುವ ವೀರಶೈವ ಲಿಂಗಾಯತ ಸಮಾಜಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಮುರುಘಾಮಠದ ಶ್ರೀ ಕಾಶೀನಾಥ ಸ್ವಾಮೀಜಿ ಹೇಳಿದರು.
ಮುರುಘಾಮಠದಲ್ಲಿ ಭಾನುವಾರ ಹಮ್ಮಿಕೊಂಡ ವೀರಶೈವ ಲಿಂಗಾಯತ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಬಸವ ಸಂಸ್ಕೃತಿ ಎಂಬ ಅಭಿಯಾನ ಹೊರಟಿದೆ. ಬಸವಣ್ಣನವರ ಅಂಕಿತನಾಮ ಲಿಂಗಾನಂದ ಎಂದು ತಿದ್ದಿದ ಸಂದರ್ಭದಲ್ಲಿ ಇಳಕಲ್ಲ ಸ್ವಾಮೀಜಿ, ಗದಗದ ತೋಂಟದಾರ್ಯ ಸ್ವಾಮೀಜಿ ಕೂಡಲಸಂಗಮದಲ್ಲಿ ಪ್ರತಿಭಟನೆ ಮಾಡಿದ್ದರು. ಆದರೆ ಈಗ ಇಳಕಲ್ಲ ಶ್ರೀಗಳು, ತೋಂಟದಾರ್ಯ ಶ್ರೀಗಳ ಜೊತೆಗೆ ಮಾತೆ ಮಹಾದೇವಿ ಫೋಟೋ ಬಸವ ಸಂಸ್ಕೃತಿ ಅಭಿಯಾನದ ಕರಪತ್ರದಲ್ಲಿ ಹಾಕಿದ್ದಾರೆ. ವೀರಶೈವ ಲಿಂಗಾಯತ ಸಂಸ್ಥೆ ಕಟ್ಟಿ ಬೆಳೆಸಿದ ಹಾನಗಲ್ ಕುಮಾರೇಶ್ವರ ಶ್ರೀಗಳ ಭಾವಚಿತ್ರ ಹಾಕದೆ ಮೂರ್ಖತನ ಮೆರೆದಿದ್ದಾರೆ. ವೀರಶೈವ ಲಿಂಗಾಯತ ಧರ್ಮ ಮತ್ತು ಶಿವಯೋಗ ಮಂದಿರದ ವಿರುದ್ಧ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇದು ಸಮಾಜವನ್ನು ಒಡೆದಾಳುವ ತಂತ್ರ. ಇದೊಂದು ವ್ಯವಸ್ಥಿತ ಪಿತೂರಿ ಎಂದು ಹರಿಹಾಯ್ದರು.
ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ನಮ್ಮಲ್ಲಿ ತಾಂತ್ರಿಕ ಸಮಸ್ಯೆಗಳು ಏನೇ ಇರಲಿ ಲಿಂಗಾಯತ ಹಾಗೂ ವೀರಶೈವ ನಾವೆಲ್ಲ ಒಂದು ಎನ್ನುವ ಭಾವದಿಂದ ನಾವು ಹೊರಟಿದ್ದೇವೆ. ಹಲವಾರು ನೆಪ ಮಾಡಿಕೊಂಡು ಬಲವನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಓಡಾಡುತ್ತಿದ್ದಾರೆ. ವೀರಶೈವ ಹಾಗೂ ಲಿಂಗಾಯತ ಒಂದೇ ಎಂದು ಒಗ್ಗಟ್ಟಾಗಿ ಸಾಗಬೇಕು ಎಂದರು.
ಹುಬ್ಬಳ್ಳಿಯಲ್ಲಿ ಸೆ. 19 ರಂದು ನಡೆಯುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಕಾರ್ಯಕ್ರಮದಲ್ಲಿ ಎಲ್ಲ ವೀರಶೈವ ಲಿಂಗಾಯತ ಸಮಾಜ ಬಾಂಧವರು ಭಾಗವಹಿಸಬೇಕು. ಸೆ.10 ರಂದು ಬಾಗಲಕೋಟೆಯಲ್ಲಿ ನಡೆಯುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ರಾಷ್ಟ್ರೀಯ ಬಸವದಳ, ಶರಣ ಸಾಹಿತ್ಯ ಪರಿಷತ್, ಲಿಂಗಾಯತ ಸಂಘಟನೆಗಳ ವತಿಯಿಂದ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದಲ್ಲಿ ಯಾರೂ ಭಾಗವಹಿಸಬಾರದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಮರಡಿಮಠದ ಶ್ರೀ ಅಭಿನವ ಕಾಡಸಿದ್ಧೇಶ್ವರ ಸ್ವಾಮಿಗಳು ಮಾತನಾಡಿದರು. ಜಂಗಮ ಸಮಾಜದ ಆಧ್ಯಕ್ಷ ಶಿವನಯ್ಯ ಮಳಿಮಠ, ಬಸವರಾಜ ಚಿಲ್ಲಾಪುರ, ಮಹಾಂತಯ್ಯ ಸರಗಣಾಚಾರಿ, ಪ್ರಕಾಶ ಮುರಗೋಡ, ರವಿ ಗೌಡರ, ರವಿ ಅಂಗಡಿ, ವಿಶ್ವನಾಥ ಹಿರೇಮಠ, ಈರಣ್ಣ ಹಳ್ಳಿ, ದೇವಪ್ಪ ಹಡಪದ, ಶಂಕ್ರಪ್ಪ ಐಹೊಳೆ, ಮುತ್ತಪ್ಪ ಹಡಪದ, ಸಿದ್ದಪ್ಪ ಸುಣಗದ, ಬಸಪ್ಪ ತೋಳಮಟ್ಟಿ, ಚಂದ್ರಶೇಖರ ಗೆದ್ದಲಮರಿ, ಶ್ರೀಕಾಂತ ಸರಗಣಾಚಾರಿ, ಉಮಾಶಂಕರ ಶಿವನಗೌಡರ, ಅಶೋಕ ಬಾದವಾಡಗಿ, ಪ್ರಭು ತಟ್ಟಿಮಠ, ಕುಮಾರ ಸಾವಳಗಿಮಠ ಇದ್ದರು.