ವಿಕ್ರಮ ನಾಡಿಗೇರ ಧಾರವಾಡ
ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಸಾಕಷ್ಟು ಜಾಗೃತಿ ಕಾರ್ಯದ ಜತೆಗೆ ಪೋಕ್ಸೋ (ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ) ಕಾಯ್ದೆಯಂತಹ ಕಠಿಣ ಕಾನೂನು ಜಾರಿಗೆ ತರಲಾಗಿದೆ. ಇದರ ಮಧ್ಯೆಯೂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ಪ್ರಕರಣಗಳ ಸಂಖ್ಯೆ ಏರುತ್ತಲೇ ಇವೆ.
ಹು&ಧಾ ನಗರ ಪೊಲೀಸ್ ಆಯುಕ್ತರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ ಪೋಕ್ಸೋ ಕಾಯ್ದೆ ಅಡಿ 2023&24ನೇ ಸಾಲಿನಲ್ಲಿ (ಮಾರ್ಚ್ ತಿಂಗಳವರೆಗೆ) 56 ಪ್ರಕರಣಗಳು ಸೇರಿ 5 ವರ್ಷಗಳಲ್ಲಿ 215 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಸೃಷ್ಟಿಸಿದಂತಾಗಿದೆ.
ಎಳೆ ವಯಸ್ಸಿನ ಮಕ್ಕಳ ಮೇಲೆ ವಿಕೃತವಾಗಿ ನಡೆಸುತ್ತಿರುವ ದೌರ್ಜನ್ಯದ ಸಂರ್ಪೂಣ ನಿಯಂತ್ರಣ ಹೇಗೆ? ಎಂಬುದೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸವಾಲಿನ ಕಾರ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಪೋಕ್ಸೋ ಕಾಯ್ದೆ ಮಾಹಿತಿ ನೀಡಲಾಗುತ್ತಿದ್ದರೂ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕಾನೂನು ಇದೆ ಎಂಬ ಮಾಹಿತಿ ಕೊರತೆ ಇದೆ. ಅನ್ಯಾಯಕ್ಕೊಳಗಾದ ಮಕ್ಕಳ ನ್ಯಾಯಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದರೆ ಅವಮಾನ, ತೊಂದರೆ ಅನುಭವಿಸುವ ಭಯ ಜನರಲ್ಲಿ ಸದಾ ಕಾಡುವಂತಾಗಿದೆ.
ಮಕ್ಕಳ ರಕ್ಷಣಾ ಟಕವು ಕಾನೂನು ಸೇವಾ ಪ್ರಾಧಿಕಾರ, ಇತರ ಇಲಾಖೆಗಳ ಸಹಯೋಗ, ಸಹಕಾರದಿಂದ ನಿರಂತರವಾಗಿ ಜಾಗೃತಿ, ತಿಳಿವಳಿಕೆ ಕಾರ್ಯಕ್ರಮ ನಡೆಸುತ್ತಿದೆ. ಶಾಲಾ, ಕಾಲೇಜುಗಳಲ್ಲಿ, ಮಕ್ಕಳ ಗ್ರಾಮ ಸಭೆಯಲ್ಲಿ ಜಾಗೃತಿ, ಭಿತ್ತಿಪತ್ರ ವಿತರಣೆ ಮೂಲಕ ಜಾಗೃತಿ ಮೂಡಿಸುತ್ತಿದೆ.
ಮೊದಲಿನ ದಿನಗಳಲ್ಲಿ ಪ್ರಕರಣ ನಡೆದರೂ ಮರ್ಯಾದೆಗೆ ಅಂಜಿ ದೂರು ನೀಡಲು ಹಿಂಜರಿಯುತ್ತಿದ್ದರು. ಇದೀಗ ದೂರು ನೀಡುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮ ಮೂಲಕ ಎನ್ಜಿಒ, ಪೊಲೀಸರಿಗೆ ಹಾಗೂ ಇತರ ಮಹಿಳಾ ಸಂ&ಸಂಸ್ಥೆಗಳಿಗೆ ಕಾಯ್ದೆ ಕುರಿತು ತರಬೇತಿ ಸಹ ನೀಡಲಾಗುತ್ತಿದೆ. ಇಷ್ಟೆಲ್ಲ ಇದ್ದರೂ ಮುಗ್ದ ಅಪ್ರಾಪ್ತರ ಜತೆಗೆ ರಾಕ್ಷಸರಂತೆ ವತಿರ್ಸುವ ಕೆಲಸಕ್ಕೆ ಕಡಿವಾಣ ಹಾಕುವುದು ಅಗತ್ಯ. ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ದುರುಳರಿಗೆ ತಕ್ಕಪಾಠ ಕಲಿಸಬೇಕಿದೆ.
*ಪ್ರಕರಣಗಳ ಸಂಖ್ಯೆ
2019-20-- 29
2020-21-- 43
2021-22 ---38
2022-23--- 49
2023-24 (ಮಾರ್ಚ್ ವರೆಗೆ) 56
ಪೋಕ್ಸೋ ಪ್ರಕರಣಗಳಿಗೆ ಕಡಿವಾಣ ಹಾಕಲು ನಿರಂತರ ಪ್ರಯತ್ನ ನಡೆದೇ ಇದೆ. ಇಂತಹ ಪ್ರಕರಣಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲೆ, ಕಾಲೇಜು, ಗ್ರಾಮ, ಹೋಬಳಿ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಪ್ರಕರಣಗಳನ್ನು ಹತೋಟಿಗೆ ತರುವ ಕೆಲಸ ನಡೆಯಲಿದೆ.-ನೀತಾ ವಾಡಕರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಧಾರವಾಡ