ಚಿತ್ರದುರ್ಗ: ಗುರಿಯೊಂದಿಗೆ ಸಾಗಿದರೆ ಸಾಧನೆ ಕಷ್ಟಕರವಲ್ಲ ಎಂಬುದಕ್ಕೆ ಅನೇಕ ನಿದರ್ಶನಗಳು ಕಣ್ಣ ಮುಂದಿವೆ. ಆ ನಿಟ್ಟಿನಲ್ಲಿ ಶ್ರಮದಿಂದಲೇ ಬೆಳೆದು ಬಂದ ಹೊಳಲ್ಕೆರೆ ಶಾಸಕ ಚಂದ್ರಪ್ಪ ಕೂಡ ಸಾಮಾಜಿಕ ಕ್ಷೇತ್ರದಲ್ಲಿ ಅವಿಸ್ಮರಣೀಯ ಕೆಲಸ ಮಾಡಿದ್ದಾರೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಭೋವಿ ಮಠದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಮುದಾಯದ ಸಭೆಯಲ್ಲಿ ಕುವೆಂಪು ವಿವಿ ವತಿಯಿಂದ ಗೌರವ ಡಾಕ್ಟರೇಟ್ ಪಡೆದಿರುವ ಎಂ.ಚಂದ್ರಪ್ಪ ಅವರನ್ನು ಸನ್ಮಾನಿಸಿ ಮಾತನಾಡಿದರು.
ಬಡವರ ಸಮಸ್ಯೆಗಳಿಗೆ ಸ್ಪಂದಿಸುವವರೇ ನಿಜವಾದ ಶ್ರೀಮಂತರು. ಆ ದಾರಿಯಲ್ಲಿ ಸಾಗಿದ್ದರಿಂದಾಗಿ ಚಂದ್ರಪ್ಪ 5 ಬಾರಿ ಶಾಸಕರಾಗಲು ಸಾಧ್ಯವಾಗಿದೆ. ಇದು ಯೋಗದಿಂದಲ್ಲ, ಅವರ ಯೋಗ್ಯತೆಗೆ ಒಲಿದ ಸ್ಥಾನ ಎಂದು ಬಣ್ಣಿಸಿದರು.
ಹೊಳಲ್ಕೆರೆಯನ್ನು ಮಾದರಿ ಕ್ಷೇತ್ರವಾಗಿಸಿದ್ದಾರೆ. ಬಹಳಷ್ಟು ಅಭಿವೃದ್ಧಿ ಕೈಗೊಂಡು ಜನನಾಯಕರಾಗಿದ್ದಾರೆ. ಆದರ್ಶ ರಾಜಕಾರಣಿಯಾಗಿ, ಜನಾನುರಾಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಹೋನ್ನತ ಪ್ರಶಸ್ತಿಗಳು ಲಭಿಸಲಿ ಎಂದು ಹಾರೈಸಿದರು.
ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಹೊಳಲ್ಕೆರೆ ಕ್ಷೇತ್ರಕ್ಕೆ ಚಂದ್ರಪ್ಪ ಅವರ ಕೊಡುಗೆ ಹೆಚ್ಚಿದೆ. ಪತ್ನಿ, ಮಕ್ಕಳ ಸಹಕಾರದೊಂದಿಗೆ ಗುರುವಿನ ಅಂಕುಶ ಇದ್ದಾಗ ಯಾರೇ ಆದರೂ ಪ್ರಗತಿ ಹಾದಿಯಲ್ಲಿ ಮುನ್ನಡೆಯಲಿದ್ದಾರೆ. ಚುನಾವಣೆ ಸೇರಿ ವಿವಿಧ ಸಂದರ್ಭಗಳಲ್ಲಿ ಭೋವಿ ಸಮಾಜಕ್ಕೆ ಕುಂಚಿಟಿಗ ಸಮುದಾಯ ಅಗತ್ಯ ಬೆಂಬಲ ನೀಡಿದೆ ಎಂದರು.
ಇಮ್ಮಡಿ ಶ್ರೀ ಮಾತೃ ಹೃದಯಿಯಾಗಿದ್ದು, ಯಾವುದೇ ಪಕ್ಷಕ್ಕೂ ಸೀಮಿತವಾಗಿಲ್ಲ. ಅಧಿಕಾರ ಚುಕ್ಕಾಣಿ ಹಿಡಿದವರಿಂದ ಸಮುದಾಯಕ್ಕೆ ಆಗಬೇಕಿರುವ ಕೆಲಸಗಳನ್ನು ಬುದ್ಧಿವಂತಿಕೆಯಿಂದ ಮಾಡಿಸಿಕೊಳ್ಳುವಲ್ಲಿಯೂ ಜಾಣ್ಮೆ ಮೆರೆದಿದ್ದಾರೆ. ಇಂತಹ ಚಾಕಚಕ್ಯತೆ ಹೊಂದಿರುವ ಶ್ರೀಗಳು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಅವರ ಕೈ ಬಲಪಡಿಸುವ ಮೂಲಕ ಉತ್ತುಂಗಕ್ಕೆ ಕೊಂಡೊಯ್ಯುವ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.
ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಸಾರ್ವಜನಿಕ ಬದುಕು ನನ್ನ ಸ್ವಂತದ್ದು ಎಂಬಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇದನ್ನು ಪರಿಗಣಿಸಿ ಕ್ಷೇತ್ರದ ಮತದಾರರು ಕೈಹಿಡಿದಿದ್ದಾರೆ. ರಾಜಕೀಯ ಜೀವನದಲ್ಲಿ ಸಮಾಜಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗುವ ಕಾರ್ಯ ಮಾಡಿಲ್ಲ. ನಾನೂ ಬೆಳವಣಿಗೆ ಕಾಣಲು ಶ್ರೀಗಳ ಸಹಕಾರ, ಪಾತ್ರವೂ ಹೆಚ್ಚಾಗಿದೆ. ಜನರ ಪ್ರೀತಿ, ವಿಶ್ವಾಸ, ಗೌರವಕ್ಕಿಂತ ಯಾವ ಪ್ರಶಸ್ತಿಯೂ ದೊಡ್ಡದಲ್ಲ ಎಂದು ಭಾವುಕರಾದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ಟಿ.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಚ್.ಲಕ್ಷ್ಮಣ್, ಮುಖಂಡರಾದ ನೇರ್ಲಗುಂಟೆ ರಾಮಪ್ಪ, ಚಂದ್ರಕಲಾ ಚಂದ್ರಪ್ಪ, ಎಂ.ಸಿ.ರಘುಚಂದನ್, ಕೃಷ್ಣಮೂರ್ತಿ, ಬಂಡೆ ರುದ್ರಪ್ಪ, ವೆಂಕಟೇಶ್, ತಿಮ್ಮಣ್ಣ, ಮಂಜುನಾಥ್, ತಿಪ್ಪೇಸ್ವಾಮಿ, ಗೌನಹಳ್ಳಿ ಗೋವಿಂದಪ್ಪ ಇತರರಿದ್ದರು.