ಮೈಸೂರು: ಸ್ನೇಹಿತರೊಂದಿಗೆ ವರ್ಷಾಚರಣೆಯ ಪಾರ್ಟಿ ಮುಗಿಸಿಕೊಂಡು ಬೈಕಿನಲ್ಲಿ ಮನೆಗೆ ವಾಪಸ್ ಆಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಹುಣಸೂರು ರಸ್ತೆಯ ಪ್ರಿಮಿಯರ್ ಸ್ಟುಡಿಯೋ ಸಿಗ್ನಲ್ ಜಂಕ್ಷನ್‌ನಲ್ಲಿ ಸೋಮವಾರ ಬೆಳಗಿನ ಜಾವ 2ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಹಾಸನ ಮೂಲದ ಪಡುವಾರಹಳ್ಳಿ ನಿವಾಸಿ ಹೃತಿಕ್(22), ಮೈಸೂರು ನಗರದ ಹಿನಕಲ್ ನಿವಾಸಿ ಸಂಪತ್(22) ಮೃತ ವಿದ್ಯಾರ್ಥಿಗಳು.
ಇವರಿಬ್ಬರು ಬೈಕ್‌ನಲ್ಲಿ ಸಿಟಿ ಕಡೆಯಿಂದ ಹಿನಕಲ್ ಕಡೆಗೆ ತೆರಳುತ್ತಿದ್ದಾಗ ಜಂಕ್ಷನ್‌ನಲ್ಲಿ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.