ಅಂಕೋಲಾ: ಕಾರು ಖರೀದಿಸಿದ ಖುಷಿಯಲ್ಲಿ ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ ನೀಡಿ ಪೂಜಿಸಲು ಬಂದವರು ಅಪಘಾತ ಸಂಭವಿಸಿದ ಪರಿಣಾಮ ಆಸ್ಪತ್ರೆ ಸೇರುವಂತಾಗಿದೆ.
ರಾಷ್ಟಿ›ೕಯ ಹೆದ್ದಾರಿಯ ಶೆಟಗೇರಿ ಕ್ರಾಸ್ ಮತ್ತು ಬೊಳೆ ನಡುವೆ ಶನಿವಾರ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ನಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮಕ್ಕಳು, ಮಹಿಳೆ ಯರು ಸೇರಿ ಎಂಟು ಜನ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
ತೆಲಂಗಾಣದ ಹೈದರಾಬಾದ್ ಮೂಲದ ಕುಟುಂಬವೊಂದು ನಿನ್ನೆ ಹೈದರಾಬಾದ್ನಲ್ಲಿ ಕಾರು ಖರೀದಿಸಿ ಕುಟುಂಬ ಸಮೇತ ಮುರ್ಡೆಶ್ವರಕ್ಕೆ ಪ್ರಯಾಣ ಬೆಳೆಸಿತ್ತು. ಬಾಳೆಗುಳಿ ಕ್ರಾಸ್ನಿಂದ ಜಿಸಿ ಕಾಲೇಜು ಮುಂಭಾಗದ ರಾಷ್ಟಿ›ೕಯ ಹೆದ್ದಾರಿಯ ಮೇಲ್ಸೇತುವೆಯ ಮೂಲಕ ಕುಮಟಾ ಕಡೆ ತೆರಳುತ್ತಿದ್ದರು.
ಈ ವೇಳೆ ಕಾರಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡಿದ್ದು, ಕಾರಿನ ಚಾಲಕ ಬ್ರೇಕ್ ಹಾಕಲು ಯತ್ನಿಸಿದಾಗ ಬ್ರೇಕ್ ಫೇಲಾಗಿದೆ. ಪಕ್ಕದಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಕಾರಿನಲ್ಲಿದ್ದ ಯುವಕ ತಿಳಿಸಿದ್ದಾನೆ. ಆದರೆ, ವೇಗವಾಗಿ ಕಾರು ಚಾಲನೆ ಮಾಡಿದ್ದೆ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಏಕೆಂದರೆ ಕಾರು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಬುಡ ಸಮೇತ ಉರುಳಿ ಬಿದ್ದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು ಬಲ ಭಾಗದ ರಸ್ತೆಯಲ್ಲಿ ಪಲ್ಟಿ ಆಗಿದೆ. ಏರ್ಬ್ಯಾಗ್ ತೆರೆದುಕೊಂಡ ಪರಿಣಾಮ ಹೆಚ್ಚಿನ ಅವಘಡ ಸಂಭವಿಸಿಲ್ಲ.
ರಸ್ತೆಯಲ್ಲಿದ್ದ ಕಾರನ್ನು ಐಆರ್ಬಿ ಸಿಬ್ಬಂದಿ ಕ್ರೇನ್ ಮೂಲಕ ತೆರವುಗೊಳಿಸಿದರು.