ಜಿಲ್ಲೆ

ಉತ್ತರ ಕನ್ನಡ ಜಿಲ್ಲೆಯ ಅಮೂಲ್ಯ ರತ್ನ ದಿನಕರ ದೇಸಾಯಿ

ಅಂಕೋಲಾ: ಡಾ. ದಿನಕರ ದೇಸಾಯಿ ಅವರು ಉತ್ತರ ಕನ್ನಡ ಜಿಲ್ಲೆಯ ಅಮೂಲ್ಯ ರತ್ನ, ಅವರನ್ನು ಪಡೆದ ಈ ಜಿಲ್ಲೆಯ ಜನ ಭಾಗ್ಯವಂತರು. ಅವರ ತ್ಯಾಗ ಮತ್ತು ಸೇವಾ ಮನೋಭಾವ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಮತ್ತು ಜಿ.ಸಿ. ಕಾಲೇಜ್ ಸಹಯೋಗದಲ್ಲಿ ಭಾನುವಾರ ಜಿ.ಸಿ. ಕಾಲೇಜ್​ನ ಆವರಣದಲ್ಲಿ ಹಮ್ಮಿಕೊಂಡ ಶೈಕ್ಷಣಿಕ ಕ್ರಾಂತಿಯ ಹರಿಕಾರ ಡಾ. ದಿನಕರ ದೇಸಾಯಿ ಅವರ ಜನ್ಮದಿನದ ಅಂಗವಾಗಿ ದಿನಕರ ದೇಸಾಯಿ ಅವರ ಪುತ್ಥಳಿಗೆ ಮಾಲಾರ್ಪಣೆಗೈದು ಅವರು ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಡಾ.ಆರ್.ಜಿ. ಗುಂದಿ ಮಾತನಾಡಿ, ಈ ಕಾಲೇಜ್​ನ ವಿದ್ಯಾರ್ಥಿಗಳಿಂದ ಕವನಗಳನ್ನು ಮತ್ತು ದಿನಕರ ದೇಸಾಯಿವರ ಕುರಿತು ಪ್ರಬಂಧಗಳನ್ನು ರಚಿಸಿ ಉತ್ತಮವಾದುದನ್ನು ಆಯ್ಕೆ ಮಾಡಿ ಕಸಾಪ ವತಿಯಿಂದ ಅದನ್ನು ಪುಸ್ತಕ ರೂಪದಲ್ಲಿ ಹೊರತರುವುದಾದರೆ ಅದರ ಸಂಪೂರ್ಣ ಖರ್ಚನ್ನು ತಾವೇ ಭರಿಸುವುದಾಗಿ ಘೊಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಸಿ .ಕಾಲೇಜಿನ ಪ್ರಾಚಾರ್ಯ ಡಾ.ಎಸ್.ವಿ. ವಸ್ತ್ರದ ಮಾತನಾಡಿದರು. ಕಸಾಪ ಕಾರ್ಯದರ್ಶಿ ಜಗದೀಶ ಜಿ. ನಾಯಕ ಹೊಸ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಪೊ›. ಮೋಹನ ಹಬ್ಬು, ಪ್ರಕಾಶ ಕುಂಜಿ, ಎನ್.ವಿ. ರಾಠೋಡ, ಜಯಶೀಲ ಆಗೇರ, ರಫೀಕ ಶೇಖ, ಎಂ.ಬಿ. ಆಗೇರ, ಪ್ರಕಾಶ ಗಾಂವಕರ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಕಾರ್ಯದರ್ಶಿ ವಿದ್ಯಾಧರ ಮೊರಬಾ, ಜಿ.ಸಿ. ಕಾಲೇಜಿನ ಉಪನ್ಯಾಸಕ ವಿ.ಎಂ. ನಾಯ್ಕ, ಗ್ರಂಥ ಪಾಲಕ ನಂಜುಂಡಯ್ಯ, ಸಿಬ್ಬಂದಿ ಸಚಿನ ಶೆಟ್ಟಿ ಇದ್ದರು.

ಬಹುಮಾನ ವಿತರಣೆ: ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ನಡೆಸಿದ ಚುಟುಕು ವಾಚನ ಸ್ಪರ್ಧೆಗಳಲ್ಲಿ ವಿಜೇತರಾದ ಬಿ.ಕಾಂ. ಪದವಿಯ ಸೃಷ್ಟಿ ಎಸ್.ನಾಯಕ (ಪ್ರಥಮ), ಬಿ.ಎಸ್​ಸಿ ಪದವಿಯ ನಿಶ್ಚಿತಾ ಎಸ್. ನಾಯಕ (ದ್ವಿತೀಯ), ಎಂ.ಎಸ್​ಸಿ ಸ್ನಾತಕೋತ್ತರ ವಿದ್ಯಾರ್ಥಿ ಪ್ರತೀಕ್ಷಾ ಬನಸೋಡೆ (ತೃತೀಯ) ಮತ್ತು ಪೋ›ತ್ಸಾಹಕವಾಗಿ ಪಿಯು ದ್ವಿತೀಯ (ವಿಜ್ಞಾನ) ನಾಗಶ್ರೀ ನಾಯ್ಕ, ಪಿಯು ಪ್ರಥಮ (ವಿಜ್ಞಾನ) ದರ್ಶನ ನಾಯ್ಕ ಅವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.