ಕೋಲಾರ: ಬೆಂಗಳೂರಿನಲ್ಲಿ ಸಿಎಎ ವಿರುದ್ಧ ನಡೆದ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯ ಹಾಗೂ ಅವರಿಗೆ ಪ್ರೇರಣೆ ನೀಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಬಜರಂಗದಳ ಕಾರ್ಯಕರ್ತರು ನಗರಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಆರಕ್ಷಕ ಉಪನಿರೀಕ್ಷಕ ಅಣ್ಣಯ್ಯಗೆ ಮನವಿ ಸಲ್ಲಿಸಿದರು.
ಬಜರಂಗದಳದ ಜಿಲ್ಲಾ ಸಂಚಾಲಕರಾದ ಬಾಬು ಮಾತನಾಡಿ, ಈ ದೇಶದ ಅನ್ನ ತಿಂದು ಪಾಕ್ ಪರ ಜೈಕಾರ ಹಾಕುವವರ ಸಂಖ್ಯೆ ಹೆಚ್ಚುತ್ತಿದೆ, ಇಂತಹವರಿಗೆ ಯಾರು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದನ್ನು ಪೊಲೀಸರು ಪತ್ತೆಹಚ್ಚಬೇಕು ಎಂದು ಆಗ್ರಹಿಸಿದರು.
ಸಿಎಎ ದೇಶದ ಪ್ರತಿ ಪ್ರಜೆಗೂ ಪೌರತ್ವ ನೀಡುವ ಕಾಯ್ದೆಯಾಗಿದೆ, ಇದರ ವಿರುದ್ಧ ವಿನಾಕಾರಣ ತಪ್ಪು ಮಾಹಿತಿ ರವಾನಿಸಿ ಜನಸಮುದಾಯಗಳ ನಡುವಿನ ಸೌಹಾರ್ದತೆ ಕದಡುವ ಸಂಚು ನಡೆಯುತ್ತಿದೆ, ಇದರಿಂದ ದೇಶದ ಐಕ್ಯಮತ್ಯಕ್ಕೆ ಧಕ್ಕೆಯಾಗದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಎಲ್ಲ ಸಮುದಾಯದವರೂ ಸಹೋದರರಂತೆ ಬಾಳುತ್ತಿದ್ದಾರೆ, ಆದರೆ ಕೆಲವು ಮಂದಿ ಜನರನ್ನು ದಿಕ್ಕುತಪ್ಪಿಸಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಇಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು ಎಂದರು.
ಬಜರಂಗದಳ ಮುಖಂಡರಾದ ಆರ್.ಬಾಲಾಜಿ, ಅಪ್ಪಿಆನಂದ್, ಡಿ.ಆರ್.ನಾಗರಾಜ್, ಮಂಜು, ವಿಜಯಕುಮಾರ್, ಸುಮನ್, ಭವಾನಿ, ಕುಮಾರ್, ಮುರಳಿ,ಪ್ರವೀಣ್ ಮತ್ತಿತರರಿದ್ದರು.
ಅಮೂಲ್ಯಗಿದೆ ಪಾಕಿಸ್ತಾನದ ಕೈವಾಡ: ಭಾರತದಲ್ಲಿದ್ದುಕೊಂಡು ಅಮೂಲ್ಯ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಅಕ್ಷ್ಯಮ್ಯ ಅಪರಾಧ. ಈ ರೀತಿಯ ಘೋಷಣೆ ಕೂಗಿದ್ದರ ಹಿಂದೆ ಪಾಕಿಸ್ತಾನದ ಕೈವಾಡ ಇರಬಹುದು ಎಂದು ಸಂಸದ ಎಸ್.ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರದ ತಮ್ಮ ನಿವಾಸದಲ್ಲಿ ಶುಕ್ರವಾರ ಮಾತನಾಡಿ, ಪಾಕಿಸ್ತಾನದ ಪರ ಘೋಷಣೆ ಕೂಗಿ ಸದ್ಯ ಪೊಲೀಸರ ವಶದಲ್ಲಿರುವ ಅಮೂಲ್ಯ ಹಣದ ಆಸೆಗೆ ಹೀಗೆ ಮಾಡಿದ್ದಾಳೆ ಅನಿಸುತ್ತಿದೆ ಎಂದು ಆರೋಪಿಸಿದರು.
ಅಮೂಲ್ಯ ಲಿಯೋನಾ ತಂದೆಯೇ ಮಗಳಿಗೆ ಶಿಕ್ಷೆ ಆಗಲಿ ಎಂದು ಹೇಳಿದ್ದಾರೆ. ತಂದೆಗೆ ಬೇಡವಾದ ಮಗಳು ದೇಶಕ್ಕೂ ಬೇಡ. ಇಂತಹ ದೇಶದ್ರೋಹ ಘೋಷಣೆ ಕೂಗುವವರನ್ನು ಗಡಿಪಾರು ಮಾಡಿದಾಗ ಮಾತ್ರ ಬುದ್ಧಿ ಬರುತ್ತದೆ ಎಂದರು.
ಅಮೂಲ್ಯ ಪಾಕಿಸ್ತಾನದವರನ್ನು ಮದುವೆಯಾಗಲು ಬಯಸಿದ್ದಾರೆ. ಅದಕ್ಕಾಗಿ ಅವರನ್ನು ಮೆಚ್ಚಿಸಲು ಇಂತಹ ಮಾತುಗಳನ್ನು ಆಡುತ್ತಿದ್ದಾರೆ. ವಿರೋಧ ಪಕ್ಷಗಳು ಪ್ರಧಾನಿ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ದೇಶದ್ರೋಹದ ಕಾನೂನಿನಲ್ಲಿ ತಿದ್ದುಪಡಿ ತಂದು ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಇಂತಹವರಿಗೆ ಬುದ್ಧಿ ಬರುತ್ತದೆ ಎಂದು ತಿಳಿಸಿದರು.
ದೇಶದಿಂದ ಗಡಿಪಾರು ಮಾಡಿ: ಸಿಎಎ ವಿರುದ್ಧ ಕಾರ್ಯಕ್ರಮದಲ್ಲಿ ಅಮೂಲ್ಯ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ತಪ್ಪು. ಪಾಕ್ ಪರ ಘೋಷಣೆ ಕೂಗಿದ ಕೂಡಲೆ ವೇದಿಕೆ ಮೇಲಿದ್ದವರು ಕತ್ತು ಹಿಸುಕಿ ಸಾಯಿಸಬೇಕಿತ್ತು. ವೇದಿಕೆ ಮೇಲೆ ನಾನು ಇದ್ದಿದ್ರೆ ಹಾಗೆಯೇ ಮಾಡ್ತಿದ್ದೆ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ಅಮೂಲ್ಯ ಲಿಯೋನಾನನ್ನು ಕೂಡಲೆ ದೇಶದಿಂದ ಗಡಿಪಾರು ಮಾಡಬೇಕು, ವೇದಿಕೆ ಮೇಲಿದ್ದ ಎಲ್ಲರ ಮೇಲೆಯೂ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ದೇಶಕ್ಕೆ ದ್ರೋಹ ಮಾಡಿದ್ರೆ ಹೆತ್ತ ತಾಯಿಗೆ ಮೋಸ ಮಾಡಿದಂತೆ ಎಂದರು.
ಪಾಕಿಸ್ತಾನದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಅಲ್ಲಿಯೇ ಹೋಗಲಿ. ಅಲ್ಲಿಯೇ ಯಾರನ್ನಾದರೂ ಮದುವೆಯಾಗಲಿ, ಈ ಘಟನೆ ಹಿಂದೆ ಉಗ್ರರ ಕೈವಾಡ ಇದ್ದಂತಿದೆ, ಘಟನೆ ಹಿಂದೆ ಪಾಕಿಸ್ತಾನ ಪ್ರಚೋದಿತ ಪ್ರಭಾವಿಗಳ ಕೈವಾಡ ಇದ್ದಂತಿದೆ ಎಂದರು.