ಹನುಮ ಜಯಂತಿ ನಿಮಿತ್ತ ಗಂಗಾವತಿ ತಾಲೂಕಿನ ದೇವಘಾಟದ ಶ್ರೀ ಅಮೃತೇಶ್ವರ ದೇವಾಲಯದಲ್ಲಿ ಇರುಮುಡಿ ಪೂಜೆ, ಪವಮಾನ ಹೋಮ ಶುಕ್ರವಾರ ಜರುಗಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ನಗರಸಭೆ ಸದಸ್ಯರಾದ ಪರಶುರಾಂ ಮಡ್ಡೇರ್, ಉಮೇಶ ಸಿಂಗನಾಳ್ ಇತರರಿದ್ದರು.  
ಜಿಲ್ಲೆ

ಅಮೃತೇಶ್ವರ ದೇಗುಲದಲ್ಲಿ ಪವಮಾನ ಹೋಮ

ಗಂಗಾವತಿ: ಹನುಮ ಜಯಂತ್ಯುತ್ಸವ ನಿಮಿತ್ತ ತಾಲೂಕಿನ ದೇವಘಾಟದ ಶ್ರೀ ಅಮೃತೇಶ್ವರ ದೇವಾಲಯದಲ್ಲಿ ಇರುಮುಡಿ ಪೂಜೆ, ಪವಮಾನ ಹೋಮ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ದೇವಾಲಯದಲ್ಲಿನ ಅಮೃತೇಶ್ವರ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪವಮಾನ ಹೋಮ ಮತ್ತು ಪೂರ್ಣಾಹುತಿ ನೆರವೇರಿಸಲಾಯಿತು. ಹಲವು ದಿನಗಳಿಂದ ಕಠಿಣ ವ್ರತ ಕೈಗೊಂಡಿದ್ದ ಮಾಲಾಧಾರಿಗಳಿಂದ ಇರುಮುಡಿ ಪೂಜೆ ನೆರವೇರಿಸಿದ್ದು, ಮೆರವಣಿಗೆ ಮೂಲಕ ಅಂಜನಾದ್ರಿ ಬೆಟ್ಟಕ್ಕೆ ಬೀಳ್ಕೊಡಲಾಯಿತು.

ವಿಎಚ್‌ಪಿ ಮುಖಂಡ ನೀಲಕಂಠಪ್ಪ ನಾಗಶೆಟ್ಟಿ ನೇತೃತ್ವದಲ್ಲಿ ಇರುಮುಡಿ ಪೂಜೆ ವಿಧಿ ವಿಧಾನ ಪೂರೈಸಲಾಯಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ನಗರಸಭೆ ಸದಸ್ಯರಾದ ಉಮೇಶ ಸಿಂಗನಾಳ, ಪರಶುರಾಮ್ ಮಡ್ಡೇರ್, ಶರಭೋಜಿರಾವ್ ಗಾಯಕ್ವಾಡ್, ಮುಖಂಡರಾದ ದುರುಗೇಶ ದೊಡ್ಮನಿ, ಶಿವಕುಮಾರ ಅರಿಕೇರಿ ಇತರರಿದ್ದರು.

ಅಯ್ಯಪ್ಪ ಸ್ವಾಮಿ ದೇವಸ್ಥಾನ: ನಗರದ ಆನೆಗೊಂದಿ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಹನುಮ ಮಾಲಾಧಾರಿಗಳಿಂದ ಇರುಮುಡಿ ಪೂಜೆ ಮತ್ತು ಪವಮಾನ ಹೋಮ ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ಪರಿವಾರದ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸಾಮೂಹಿಕ ಭಜನೆ ಮತ್ತು ಹನುಮಾನ ಚಾಲೀಸಾ ಪಾರಾಯಣ ಹಮ್ಮಿಕೊಳ್ಳಲಾಗಿತ್ತು. ಇರುಮುಡಿ ಪೂಜೆ ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ಜರುಗಿತು. ವಿವಿಧ ಸಮಾಜದ ಮುಖಂಡರಾದ ನಾಗರಾಜ ಚಳಗೇರಿ, ಯಮನೂರಿ ಚೌಡ್ಕಿ, ಪಂಪಣ್ಣನಾಯಕ, ಅಯ್ಯನಗೌಡ ಹೇರೂರು, ಹೊಸ್ಮಲಿ ರಾಮಕೃಷ್ಣ, ಶಿವಕುಮಾರ ಆದೋನಿ ಇತರರಿದ್ದರು.