ಜಿಲ್ಲೆ

ರೈಲು ನಿಲ್ದಾಣಗಳ ಪುನರ್ ಅಭಿವೃದ್ಧಿ ಡಿಸೆಂಬರ್​ಗೆ ಪೂರ್ಣ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ‘ಅಮೃತ ಭಾರತ’ ಯೋಜನೆ ಅಡಿ ದೇಶಾದ್ಯಂತ 1,275 ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಗೊಳಿಸಲಾಗುತ್ತಿದ್ದು, ಈ ಪೈಕಿ 508 ರೈಲು ನಿಲ್ದಾಣಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆ. 6ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹರ್ಷ ಖರೆ, ಹುಬ್ಬಳ್ಳಿ ರೈಲ್ವೆ ವಿಭಾಗ ವ್ಯಾಪ್ತಿಯ 16 ರೈಲು ನಿಲ್ದಾಣಗಳನ್ನು ಸಹ ಪುನರ್ ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ಪೈಕಿ ಆ. 6ರಂದು ಆರು ನಿಲ್ದಾಣಗಳ ಪುನರ್ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸವೂ ನೆರವೇರಲಿದೆ ಎಂದರು.

ಅಳ್ನಾವರ, ಘಟಪ್ರಭಾ, ಗೋಕಾಕ ರೋಡ, ಗದಗ, ಕೊಪ್ಪಳ ಹಾಗೂ ಬಳ್ಳಾರಿ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿ ಡಿಸೆಂಬರ್ ಅಥವಾ 2023ರ ಜನವರಿವೊಳಗಾಗಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಈ ಯೋಜನೆ ಅಡಿ ಕರ್ನಾಟಕದಲ್ಲಿ ಒಟ್ಟು 55 ರೈಲು ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಗೊಳಿಸಲಾಗುತ್ತದೆ. ರೈಲು ನಿಲ್ದಾಣಗಳ ಪ್ರವೇಶ ಸುಗಮಗೊಳಿಸುವುದು, ಎಸ್ಕಲೇಟರ್​ಗಳ ಸೌಲಭ್ಯ, ನಿಲ್ದಾಣದ ಸ್ವಚ್ಛತೆ, ಉಚಿತ ವೈಫೈ, ಸ್ಥಳೀಯ ಉತ್ಪನ್ನಗಳನ್ನು ಒಂದು ನಿಲ್ದಾಣ ಒಂದು ಉತ್ಪನ್ನ ಮಳಿಗೆ ಮೂಲಕ ಪ್ರಯಾಣಿಕರಿಗೆ ತಲುಪಿಸುವುದು, ಪ್ರಯಾಣಿಕರಿಗೆ ಮಾಹಿತಿ ವ್ಯವಸ್ಥೆ, ನಿಲ್ದಾಣದ ಎರಡೂ ಬದಿಗಳನ್ನು ನಗರದೊಂದಿಗೆ ಸಂರ್ಪಸುವ ವ್ಯವಸ್ಥೆ, ವಾಣಿಜ್ಯ ಮಳಿಗೆ, ನಿಲ್ದಾಣಗಳನ್ನು ನಗರ ಕೇಂದ್ರಗಳನ್ನಾಗಿ ರೂಪಿಸುವುದು ಸೇರಿ ಇತರ ಸೌಲಭ್ಯಗಳನ್ನು ಈ ಯೋಜನೆ ಅಡಿ ಒದಗಿಸಲಾಗುವುದು ಎಂದು ಹೇಳಿದರು.

ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ನಿಲ್ದಾಣದಿಂದ ನಿತ್ಯ ಅಂದಾಜು 30 ರಿಂದ 35 ಸಾವಿರ ಪ್ರಯಾಣಿಕರು ಸಂಚರಿಸುತ್ತಾರೆ. ಮೈಸೂರು ಹಾಗೂ ಹುಬ್ಬಳ್ಳಿ ನಿಲ್ದಾಣಗಳನ್ನು ಸಹ ಇನ್ನಷ್ಟು ಅಭಿವೃದ್ಧಿಗೊಳಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಕ್ಯಾಸಲ್​ರಾಕ್ ಬಳಿ ಕುಸಿದಿದ್ದ ಭೂಕುಸಿತವನ್ನು ಸರಿಪಡಿಸಲಾಗಿದ್ದು, ಆ. 2 ರಿಂದ ಈ ಮಾರ್ಗದಲ್ಲಿ ಸರಕು ಹಾಗೂ ಪ್ರಯಾಣಿಕರ ರೈಲು ಸಂಚಾರ ಪುನರ್ ಆರಂಭಗೊಂಡಿದೆ ಎಂದು ತಿಳಿಸಿದರು.

ಗತಿಶಕ್ತಿ ವಿಭಾಗದ ಮುಖ್ಯ ಯೋಜನಾ ವ್ಯವಸ್ಥಾಪಕ ಸಂಜಯಕುಮಾರ, ಉಪ ಮುಖ್ಯ ಇಂಜಿನಿಯರ್ ರಮೇಶ ಚಂದ್ರ, ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಹರೀತಾ ಎಸ್. ಸುದ್ದಿಗೋಷ್ಠಿಯಲ್ಲಿ ಇದ್ದರು.