ಬೆಳ್ತಂಗಡಿ: ಅಮೃತ ಸೋಮೇಶ್ವರ ಸದಾ ಮಾನವೀಯತೆಯ ಪರವಾಗಿದ್ದರು. ವಿಶ್ವ ಮಾನವ ಕಲ್ಪನೆ ಅವರ ಉಸಿರಾಗಿತ್ತು ಎಂದು ಸಾಹಿತಿ, ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಹೇಳಿದರು.
ಬೆಳ್ತಂಗಡಿಯಲ್ಲಿ ಅಮೃತ ಸೋಮೇಶ್ವರ ನೆನಪಿನ ‘ಅಮೃತ ಮಥನ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜದ ಪ್ರತಿಯೊಬ್ಬರಿಗೂ ಗೌರವದ ಬದುಕು ಸಿಗಬೇಕು ಎನ್ನುವುದರ ಬಗ್ಗೆ ಅವರು ಖಚಿತ ನೋಟ ಹೊಂದಿದ್ದರು. ಅವರ ಸಾಹಿತ್ಯ ಇದನ್ನೇ ಪ್ರತಿಪಾದಿಸುತ್ತದೆ. ತುಳು ಸಾಹಿತ್ಯ ಮತ್ತು ಯಕ್ಷಗಾನ ರಂಗಕ್ಕೆ ಅವರು ನೀಡಿದ ತಿರುವು ಅಸಾಧಾರಣವಾದದ್ದು. ತಂದೆಯ ವ್ಯಕ್ತಿತ್ವ ಹಾಗೂ ಸಾಹಿತ್ಯದ ಅವಲೋಕನ ನಡೆಸಿದ ಡಾ.ಚೇತನ ಸೋಮೇಶ್ವರ ಅವರು ತಂದೆ ಮೌನಿ ಆದರೆ ಸಮಾಜದ ಅನ್ಯಾಯದ ಬಗ್ಗೆ ಸದಾ ದನಿ ಎತ್ತುತ್ತಿದ್ದರು. ಅವರ ಬರಹಗಳು ಒಂದು ರೀತಿಯಲ್ಲಿ ಸಾರ್ವಜನಿಕ ಆಸ್ತಿಯಾಗಿತ್ತು. ಜನಸಾಮಾನ್ಯರು ಅವರ ಗೀತೆಗಳನ್ನು ತಮ್ಮ ಬದುಕಿನ ಪ್ರತಿಬಿಂಬ ಎಂದು ಭಾವಿಸಿದ್ದರು ಎಂದರು.
ರಂಗ ನಿರ್ದೇಶಕ ಉಚ್ಚಿಲ್ ಮಾತನಾಡಿ, ತುಳು ರಂಗಭೂಮಿಗೆ ಹೊಸತನ ದೊರಕಿದ್ದು ಅಮೃತರ ರಚನೆಗಳಿಂದ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜೇಶ್ವರಿ ಚೇತನ್, ಸಮಾಜ ವಿಜ್ಞಾನಿ ಪ್ರಕಾಶ ಭಟ್, ಚರಣ್ ಕುಮಾರ್, ನರೇಂದ್ರ ರೈ ದೇರ್ಲ, ಜಿತು ನಿಡ್ಲೆ, ಡಾ.ಉದಯಚಂದ್ರ, ಡಾ.ರವಿನಾರಾಯಣ ಚಕ್ರಕೋಡಿ ಮಾತನಾಡಿದರು. ಪ್ರಕಾಶ ಭಟ್, ಚೇತನ್ ಸೋಮೇಶ್ವರ, ವಿದ್ದು ಉಚ್ಚಿಲ್, ಜಿ.ಎನ್.ಮೋಹನ್ ಉಪಸ್ಥಿತರಿದ್ದರು.