ಹರಪನಹಳ್ಳಿ: ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಮದ್ಯಪಾನದಿಂದ ದೂರವಿರಬೇಕು ಎಂದು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕಮ್ಮತ್ತಹಳ್ಳಿ ವಿರಕ್ತ ಮಠದಲ್ಲಿ ಮಂಗಳವಾರ 2ನೇ ದಿನದ ಚನ್ನಬಸವ ಶಿವಯೋಗಿಯವರ 17ನೇ ವರ್ಷದ ಸ್ಮರಣೋತ್ಸವ ಹಾಗೂ ಬಸವ ತತ್ವ ಸಮ್ಮೇಳನದಲ್ಲಿ ಮಾತನಾಡಿದರು.
ಕುಡಿತದ ದಾಸರಾದಲ್ಲಿ ಮನೆಯ ಸ್ಥಿತಿ ಹದಗೆಡುತ್ತದೆ. ಆದ್ದರಿಂದ ಮಹಿಳೆಯರೆಲ್ಲ ಸೇರಿ ಒಗ್ಗಟ್ಟಾಗಿ ಮದ್ಯಪಾನದ ವಿರುದ್ಧ ಹೋರಾಡಬೇಕಾಗಿದೆ. ರಾಜ್ಯ ಸರ್ಕಾರ ಹೊಸದಾಗಿ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಶರಣರ ತತ್ವ ಸಿದ್ಧಾಂತ, ಪರಂಪರೆ ಉಳಿಸಿಕೊಂಡಲ್ಲಿ ಬಸವತತ್ವ ಉಳಿಯುತ್ತದೆ. ಮೊದಲು ಮಠಾಧೀಶರು ತಮ್ಮ ಮಠದ ಭಕ್ತಾದಿಗಳನ್ನು ಬದಲಾವಣೆ ಮಾಡಬೇಕು. ಆಗ ಮಾತ್ರ ಸಮಾಜ ಬದಲಾವಣೆಯಾಗಲು ಸಾಧ್ಯ. ಶ್ರೀ ಚನ್ನಬಸವ ಶಿವಯೋಗಿಗಳು ಬಸವಣ್ಣನವರ ಆರಾಧಕರಾಗಿದ್ದರು ಎಂದು ಸ್ಮರಿಸಿದರು.
ಕಮ್ಮತ್ತಹಳ್ಳಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ಜಗಜ್ಯೋತಿ ಬಸವಣ್ಣನವರ ಆಚಾರ- ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಬಸವಣ್ಣನವರ ಕಾಲದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನ ಮಾನಕ್ಕೆ ಆದ್ಯತೆ ನೀಡಿದ್ದರು. ಕನ್ನಡ ನಾಡಿನಲ್ಲಿ ಅನೇಕ ಧರ್ಮಗಳು ಹುಟ್ಟಿದ್ದರೂ ಬಸವಣ್ಣನವರು ಕೊಟ್ಟ ಧರ್ಮ ಲಿಂಗಾಯತ ಧರ್ಮ, ಅದರ ಅನುಯಾಯಿಗಳು ನಾವು ಎಂದರು.
ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ವಿರಕ್ತಮಠದಲ್ಲಿ ಇಷ್ಟೊಂದು ಜನಸ್ತೋಮ ಸೇರಿರುವುದನ್ನು ನೋಡಿದರೆ ಬಸವಣ್ಣನವರ ಕಾಲದ ಎರಡನೇ ಅನುಭವ ಮಂಟಪ ನೋಡಿದಂತಾಗುತ್ತದೆ. ಕುಟುಂಬದಲ್ಲಿ ಸಂಸ್ಕಾರವಿದ್ದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬಸವ ಬಳಗ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆದವು. ಪ್ರಮುಖರಾದ ಕರವೀರ ಶೆಟ್ರು, ಕೆ.ಪಿ.ಪಾಲಯ್ಯ, ಎಸ್.ಕೆ.ಮಂಜುನಾಥ್, ಜಿ.ಎಂ.ಅನಿತ್, ಮಹೇಶ್ವರಪ್ಪ ಹಾಗೂ ಬಸವ ಬಳಗದ ಯುವಕ ಸಂಘದವರಿದ್ದರು.