ಹುಬ್ಬಳ್ಳಿ : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ 20 ಸ್ಥಳಗಳಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್ಗೆ 8,682 ರೂ.ದಂತೆ ಪ್ರತಿ ರೈತನಿಂದ ಗರಿಷ್ಠ 10 ಕ್ವಿಂಟಾಲ್ ಹೆಸರು ಕಾಳು ಉತ್ಪನ್ನ ನೇರವಾಗಿ ಖರೀದಿ ಮಾಡಲಾಗುತ್ತದೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷೆ, ಜಿಲ್ಲಾಧಿಕಾರಿ ದಿವ್ಯ ಪ್ರಭು, ರೈತರಿಂದಲೇ ನೇರವಾಗಿ ಖರೀದಿ ಕೇಂದ್ರಗಳ ಮೂಲಕ ಹೆಸರು ಕಾಳು ಉತ್ಪನ್ನ ಖರೀದಿಸುವುದರಿಂದ ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಪ್ರಸಕ್ತ ವರ್ಷ ಮುಂಗಾರಿನಲ್ಲಿ ಜಿಲ್ಲೆಯ ಸುಮಾರು 1 ಲಕ್ಷ ಹೆಕ್ಟೆರ್ ಕೃಷಿ ಭೂಮಿಯಲ್ಲಿ ಹೆಸರು ಕಾಳು ಬಿತ್ತನೆ ಆಗಿದೆ. ರೈೖತರಿಗೆ ತೊಂದರೆ ಆಗದಂತೆ ಹೆಸರು ಕಾಳು ಖರೀದಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ರೈತರ ನೋಂದಣಿಗೆ ಕಾಲಾವಧಿಯನ್ನು ಸರ್ಕಾರದ ಆದೇಶ ಹೊರಡಿಸಿದ ದಿನಾಂಕದಿಂದ 45 ದಿನಗಳವರೆಗೆ ಹಾಗೂ ಹೆಸರುಕಾಳು ಉತ್ಪನ್ನ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಹೆಸರುಕಾಳು ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಹೆಸರುಕಾಳು ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಸೂಚಿಸಿದರು.
ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಆಹಾರ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣಕುಮಾರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ. ಭದ್ರಣ್ಣವರ, ಧಾರವಾಡ, ನವಲಗುಙದ, ಅಣ್ಣಿಗೇರಿ, ಹುಬ್ಬಳ್ಳಿ, ಕುಂದಗೋಳ ತಹಶಿಲ್ದಾರರು, ಜಿಲ್ಲೆಯ ಎಲ್ಲ ಎಪಿಎಂಸಿ ಮಾರುಕಟ್ಟೆಗಳ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಹೆಸರುಕಾಳು ಖರೀದಿ ಕೇಂದ್ರಗಳು : ಧಾರವಾಡ ತಾಲೂಕಿನ ಧಾರವಾಡ, ಉಪ್ಪಿನಬೇಟಗೇರಿ ಮತ್ತು ಹೆಬ್ಬಳ್ಳಿ, ಹುಬ್ಬಳ್ಳಿ ತಾಲೂಕಿನ ಹುಬ್ಬಳ್ಳಿ, ಬ್ಯಾಹಟ್ಟಿ, ಹೆಬಸೂರ, ಕೋಳಿವಾಡ, ನೂಲ್ವಿ, ನವಲಗುಂದ ತಾಲೂಕಿನ ಹೆಬ್ಬಾಳ, ತಿರ್ಲಾಪೂರ, ಆರೇಕುರಹಟ್ಟಿ, ಶಿರೂರ, ಮೊರಬ, ಹಾಳಕುಸುಗಲ್ಲ, ನವಲಗುಂದ, ಅಣ್ಣಿಗೇರಿ ತಾಲೂಕಿನ ಅಣ್ಣಿಗೇರಿ, ಕುಂದಗೋಳ ತಾಲೂಕಿನ ಯಲಿವಾಳ, ಯರಗುಪ್ಪಿ.