ಜಿಲ್ಲೆ

ಮಕ್ಕಳಲ್ಲಿ ಮದ್ರಾಸ್ ಐ ಪ್ರಕರಣ ಹೆಚ್ಚಳ

Kopala - Desk - Eraveni

ಕೊಪ್ಪಳ: ಜಿಲ್ಲೆಯಲ್ಲಿ ಮದ್ರಾಸ್ ಐ (ಕಣ್ಣುಬೇನೆ) ಕಾಯಿಲೆ ಪ್ರಕರಣ ಹೆಚ್ಚಳವಾಗುತ್ತಿದ್ದು, ಪೋಷಕರಲ್ಲಿ ಆತಂಕ ಸೃಷ್ಟಿ ಮಾಡಿದೆ. ಕಳೆದ 15 ದಿನಗಳಿಂದ ಮಳೆ ಹಾಗೂ ಮೋಡ ಕವಿದ ವಾತಾವರಣವಿದ್ದು, ಇದರಲ್ಲಿ ಮದ್ರಾಸ್ ಐ ಪ್ರಕರಣಗಳು ಕೂಡ ದಿನೇದಿನೆ ಹೆಚ್ಚಳವಾಗುತ್ತಿವೆ.

ಪ್ರಮುಖವಾಗಿ ಮದ್ರಾಸ್ ಐ ಬಂದ ವ್ಯಕ್ತಿಗಳ ಕಣ್ಣುರಿ, ಕಣ್ಣಿನಲ್ಲಿ ನೀರು, ತುರಿಕೆ, ಕಣ್ಣು ಕೆಂಪಾಗುವುದು ಹಾಗೂ ಹೆಚ್ಚು ಊತ ಸೇರಿ ವಿವಿಧ ಸಮಸ್ಯೆಗಳು ಕಂಡುಬರುತ್ತವೆ.

ರಾತ್ರಿ ಮಲಗುವ ವೇಳೆ ಯಾವುದೇ ಲಕ್ಷಣವಿಲ್ಲದಿದ್ದರೂ ಬೆಳಗ್ಗೆ ಎದ್ದಾಗ ಕಣ್ಣು ಊತವಾಗಿ ನಂತರ ಕೆಂಪಾಗಿ ನೀರು ಕಾಣಿಸಿಕೊಳ್ಳುತ್ತವೆ. ಇದರಿಂದ ಎರಡ್ಮೂರು ದಿನಗಳ ಕಾಲ ಕೆಲಸ ಮಾಡಲು ಕಷ್ಟವಾಗುತ್ತದೆ.

ಕುಟುಂಬದಲ್ಲಿ ಒಬ್ಬರಿಗೆ ಕಾಣಿಸಿಕೊಂಡರೇ ಸಾಕು, ಉಳಿದ ಸದಸ್ಯರಲ್ಲೂ ಮದ್ರಾಸ್ ಐ ಕಾಣಿಸಿಕೊಳ್ಳುತ್ತದೆ.

ಶಾಲಾ ಮಕ್ಕಳಲ್ಲಿ ಹೆಚ್ಚಳ: ಶಾಲೆ ಮಕ್ಕಳಲ್ಲಿ ಮದ್ರಾಸ್ ಐ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. 
ಸೋಂಕು ಹೆಚ್ಚು ಮಕ್ಕಳಲ್ಲಿಯೇ ಕಾಣುತ್ತಿದ್ದು, ಅದರಲ್ಲೂ ಶಾಲಾ ಕೊಠಡಿಯಲ್ಲಿ ಒಬ್ಬರಿಗೊಬ್ಬರು ಒಂದುಗೂಡಿ ಕುಳಿತುಕೊಳ್ಳುತ್ತಾರೆ. ಶಾಲೆಗಳಲ್ಲಿ ಇಂತಹ ಪ್ರಕರಣ ಕಂಡ ತಕ್ಷಣವೇ ಪಾಲಕರಿಗೆ ಸೂಚನೆ ನೀಡಿ, ವಿದ್ಯಾರ್ಥಿಗೆ ರಜೆ ನೀಡುತ್ತಿದ್ದಾರೆ.

ಮುನ್ನೆಚ್ಚರಿಕೆ ಕ್ರಮ: ಮದ್ರಾಸ್ ಐ ಪ್ರಕರಣ ಕಾಣಿಸುತ್ತಿದ್ದಂತೆ ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಣ್ಣು ಮತ್ತು ಕೈಗಳ ನಡುವಿನ ಸಂಪರ್ಕ ತಡೆಯಬೇಕು.

ಕಣ್ಣುಗಳನ್ನು ಕೈಯಿಂದ ಹಲವು ಬಾರಿ ಸ್ಪರ್ಶ ಮಾಡದೇ ಕನ್ನಡಕ ಹಾಕಿಕೊಳ್ಳಬೇಕು. ಮೊಬೈಲ್, ಟಿವಿ ವೀಕ್ಷಣೆ ಮಾಡಬಾರದು. ಸೋಂಕಿತರು ಬಳಸುವ ಬಟ್ಟೆಗಳನ್ನು ಬಳಸಬಾರದು. ಈ ಎಲ್ಲ ಕ್ರಮಗಳನ್ನು ಅನುಸರಿಸಿದರೆ ಸೋಂಕು ತಡೆಯಲು ಸಾಧ್ಯ.

ಇಲಾಖೆ ನಿರ್ಲಕ್ಷೃ: ಪ್ರಮುಖವಾಗಿ ಮಕ್ಕಳಿಗೆ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಆರೋಗ್ಯ ಇಲಾಖೆ ಮುಜಾಗೃತಾ ಕ್ರಮ ವಹಿಸುತ್ತಿಲ್ಲ. 
ಇಂದಿಗೂ ಗ್ರಾಮೀಣ ಭಾಗದಲ್ಲಿ ಕಣ್ಣುಬೇನೆ ಬಂದರೆ ಒಂದು ರೂ. ಗೆ ದೊರೆಯುವ ಔಷಧವನ್ನು ಹಾಕಿಕೊಳ್ಳುವ ಪದ್ಧತಿ ಇದೆ. ಇದರಿಂದ ಆರೋಗ್ಯ ಇಲಾಖೆಯು ಈ ಸೋಂಕು ತಡೆಯಲು ಪ್ರತಿ ಶಾಲೆಗಳಿಗೆ ತೆರಳಿ ಮುಂಜಾಗ್ರತ ಕ್ರಮ ವಹಿಸುವಂತೆ ಪಾಲಕರು ಒತ್ತಾಯಿಸುತ್ತಿದ್ದಾರೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಸೋಂಕು ಹೆಚ್ಚಾಗುತ್ತದೆ. ಹಳ್ಳ, ನದಿಪಾತ್ರದಲ್ಲಿ ಕಣ್ಣು ಬೇನೆ ಕಾಣಿಸಿಕೊಳ್ಳುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಕಣ್ಣು ಕೆಂಪಾಗುವಿಕೆ, ಊರಿ, ನೀರು ಸೋರುತ್ತದೆ. ಬಿಸಿ ನೀರಿನಿಂದ ಕಣ್ಣು ಸ್ವಚ್ಛಗೊಳಿಸಬೇಕು. ಮಕ್ಕಳಲ್ಲಿ ಕಂಡುಬಂದಲ್ಲಿ ಒಂದೆರಡು ದಿನ ಶಾಲೆಗೆ ಕಳಿಸದಿರುವುದು ಉತ್ತಮ.ಡಾ.ಟಿ.ಲಿಂಗರಾಜು, ಡಿಎಚ್‌ಒ, ಕೊಪ್ಪಳ

ಮದ್ರಾಸ್ ಐ ಲಕ್ಷಣ ಕಂಡುಬಂದ ಮಕ್ಕಳಿಗೆ ಶಾಲೆ ರಜೆ ನೀಡಲಾಗುತ್ತದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದರಲ್ಲೂ ಒಬ್ಬರಿಗೆ ಬಂದರೇ ಸಾಕು ಮತ್ತೊಬ್ಬರಿಗೆ ಮರುದಿನವೇ ಕಾಣಿಸಿಕೊಳ್ಳುತ್ತದೆ.
ಶಿವಕುಮಾರ ಕುಕನೂರು
       ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಖಾಸಗಿ ಶಾಲೆ ಒಕ್ಕೂಟದ ಕೊಪ್ಪಳ