ಜಿಲ್ಲೆ

ಚಿನ್ನದ ಆಸೆಯಿಂದ ಮನೆಯೊಡತಿಯನ್ನು ಉಸಿರುಗಟ್ಟಿಸಿ ಕೊಂದ ಕೆಲಸದಾಕೆ

ಬಂಟ್ವಾಳ: ಅಸಹಜ ಸಾವೆಂದು ದಾಖಲಾಗಿದ್ದ ಅಮ್ಮುಂಜೆ ಗ್ರಾಮದ ಮಹಿಳೆಯೋರ್ವರ ಸಾವು ಪ್ರಕರಣ ಪೊಲೀಸ್ ತನಿಖೆ ವೇಳೆ ಇದೊಂದು ವ್ಯವಸ್ಥಿತ ಕೊಲೆ ಎಂದು ಬಯಲಾಗಿದೆ.

ಆರೋಪಿಗಳಾದ ಮನೆ ಕೆಲಸದಾಕೆ, ಅಮ್ಟಾಡಿ ಗ್ರಾಮದ ಎಲ್ಮಾ ಪ್ರಶ್ಚಿತಾ ಬರೆಟ್ಟೊ (25) ಹಾಗೂ ಸ್ನೇಹಿತರಾದ ನರಿಕೊಂಬು ನಿವಾಸಿ ಸತೀಶ ಹಾಗೂ ಚರಣ್ ಎಂಬುವರನ್ನು ಬಂಧಿಸಲಾಗಿದೆ.

ಘಟನೆ ವಿವರ: ಜ.26ರಂದು ಅಮ್ಮುಂಜೆ ಗ್ರಾಮದಲ್ಲಿ ಬೆನೆಡಿಕ್ಟ್ ಕಾರ್ಲೋ (72) ಎಂಬ ಮಹಿಳೆಯು ಮನೆಯಲ್ಲಿ ಸಾವನ್ನಪ್ಪಿದ್ದು, ಇದೊಂದು ಅಸಹಜ ಸಾವು ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತ ಮಹಿಳೆಯ ಪುತ್ರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಕೂಲಂಕುಷವಾಗಿ ತನಿಖೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದ್ದರು. ಅದರಂತೆ ತನಿಖೆ ನಡೆಸಿದಾಗ ಮನೆ ಕೆಲಸದಾಕೆ ಸ್ನೇಹಿತರೊಂದಿಗೆ ಸೇರಿಕೊಂಡು ವೃದ್ಧೆಯ ಚಿನ್ನಾಭರಣ ದೋಚಲು ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿರುವುದಾಗಿ ಬಂಧಿತ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಎಸ್‌ಐ ಪ್ರಸನ್ನ ಹಾಗೂ ಸಿಬ್ಬಂದಿ ತನಿಖೆ ಕೈಗೆತ್ತಿಕೊಂಡಿದ್ದರು.