ವಿಜಯವಾಣಿ ಸುದ್ದಿಜಾಲ ಧಾರವಾಡ
ಎಲ್ಲ ವೈರುಧ್ಯಗಳನ್ನು ಮರೆತು ಕೂಡಿ ಬಾಳಲು ಪ್ರಯತ್ನಿಸಬೇಕು ಎಂದು ಭಾರತೀಯ ಧರ್ಮ ಸಿದ್ಧಾಂತಗಳು ಬಯಸುತ್ತವೆ. ಆಗ ಅಂಕುರಿಸುವ ಭಾವೈಕ್ಯದ ಬದುಕಿನಿಂದ ಮನುಕುಲಕ್ಕೆ ನೆಮ್ಮದಿ ಸಾಧ್ಯ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮ ಚಿಂತನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ ಮತ್ತು ಸಮಾಜ ಛಿದ್ರವಾಗಲು ಯಾರೂ ಅವಕಾಶ ಕೊಡಬಾರದು. ಸಕಲ ಜೀವಾತ್ಮರಿಗೂ ಲೇಸನ್ನು ಬಯಸಿದ ವೀರಶೈವ ಧರ್ಮದ ವಿಶಾಲ ವಿಚಾರಗಳನ್ನು ಅರ್ಥ ಮಾಡಿಕೊಂಡಾಗ ಎಲ್ಲಿಯೂ ದ್ವಂದ್ವಗಳು ಹುಟ್ಟಿಕೊಳ್ಳುವುದಿಲ್ಲ ಎಂದರು. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲ ಕಾರ್ಯಗಳ ಯಶಸ್ಸಿಗೆ ಅಮ್ಮಿನಬಾವಿ, ಸುತ್ತಲಿನ ಗ್ರಾಮಗಳ ಭಕ್ತರ ಸಹಕಾರ ಮತ್ತು ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಕಾರಣ ಎಂದರು.
ನೊಣವಿನಕೆರೆ ಸೋಮೇಕಟ್ಟೆ ಕಾಡಸಿದ್ಧೇಶ್ವರಮಠದ ಶ್ರೀ ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ, ಮಹಾರಾಷ್ಟç ನಾಗಣಸೂರ ವಿರಕ್ತಮಠದ ಡಾ. ಅಭಿನವ ಬಸವಲಿಂಗ ಸ್ವಾಮೀಜಿ, ಕಲಬುರ್ಗಿ ಬೆಳಗುಂಪಾ ಬೃಹನ್ಮಠದ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬ್ಯಾಹಟ್ಟಿ ಹಿರೇಮಠದ ಡಾ. ಸತೀಶ ಗುರೂಜಿ, ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು.
ಬಿ.ಸಿ. ಕೊಳ್ಳಿ ಸ್ವಾಗತಿಸಿದರು. ನಂತರ ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು.