matha amrithanandamayi 
ಜಿಲ್ಲೆ

28- 29ರಂದು ಮಂಗಳೂರಿಗೆ ಅಮ್ಮ

Chethan padubidri

ಪ್ರಮುಖ ಮುಖ್ಯಾಂಶಗಳು

  • ಬೋಳೂರಿನಲ್ಲಿ ಮಾತಾ ಅಮೃತಾನಂದಮಯಿ ಅಮೃತ ಸಂಗಮ
  • 7 ವರ್ಷಗಳ ಬಳಿಕ ಮಂಗಳೂರಿಗೆ ಅಮ್ಮನವರು ಆಗಮಿಸುತ್ತಿದ್ದಾರೆ
  • ದರ್ಶನಕ್ಕಾಗಿ ಟೋಕನ್ ವ್ಯವಸ್ಥೆ
ಮಂಗಳೂರು: ಬೋಳೂರು ಅಮೃತಾನಂದಮಯಿ ಮಠದಲ್ಲಿ ಮೇ 28 ಮತ್ತು 29ರಂದು "ಅಮೃತ ಸಂಗಮ-2026' ಕಾರ್ಯಕ್ರಮ ನಡೆಯಲಿದ್ದು, ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಅಮ್ಮನವರು ಆಗಮಿಸಿ ಭಕ್ತರನ್ನು ಹರಸಲಿದ್ದಾರೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೋಳೂರಿನ ಅಮೃತ ವಿದ್ಯಾಲಯಂ ಶಾಲಾ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ವಿದೇಶದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವರು. ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀನ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಪ್ರಹ್ಲಾದ್ ಜೋಶಿ, ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ರಾಜ್ಯ ಸಚಿವರು ಮತ್ತು ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವರಾದ ಶ್ರೀಪಾದ್ ಯೆಸ್ಸೋ ನಾಯಕ್ ಮುಖ್ಯ ಅತಿಥಿಗಳಾಗಿರುವರು.
ರಾಜ್ಯ ವಿಧಾನ ಸಭಾ ಅಧ್ಯಕ್ಷ ಯು. ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದ.ಕ. ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಡಿ. ವೇದವ್ಯಾಸ ಕಾಮತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತಿತರರು ಪಾಲ್ಗೊಳ್ಳುವರು ಎಂದವರು ತಿಳಿಸಿದರು.
7 ವರ್ಷಗಳ ಬಳಿಕ ಮಂಗಳೂರಿಗೆ ಅಮ್ಮನವರು ಆಗಮಿಸುತ್ತಿದ್ದಾರೆ. ಮಠವು 25ನೇ ವರ್ಷದ ಸಂಭ್ರಮಾಚರಣೆ ನಡೆಸಲಿದ್ದು, ಸಮಾಜಮುಖಿ ಮಾನವೀಯ ಸೇವಾ ಯೋಜನೆಗಳಿಗೂ ಕೂಡ ಅಮ್ಮನವರಿಂದ ಚಾಲನೆ ದೊರೆಯಲಿದೆ ಎಂದವರು ತಿಳಿಸಿದರು.
ಅಮ್ಮನವರ ದರ್ಶನಕ್ಕೆ ಶುಲ್ಕವಿಲ್ಲ
ಅಮ್ಮನ ದರ್ಶನಕ್ಕೆ ಯಾವುದೇ ಶುಲ್ಕವಿರುವುದಿಲ್ಲ, ದರ್ಶನಕ್ಕಾಗಿ ಟೋಕನ್ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 9.30ರ ಒಳಗೆ ಬಂದು ಕುಳಿತವರಿಗೆ ಟೈಮ್ ಕಾರ್ಡ್ ನೀಡಲಾಗುತ್ತದೆ. ಜನರು ಬಂದ ಸಮಯಕ್ಕೆ ಅನುಗುಣವಾಗಿ ಟೈಮ್ ಕಾರ್ಡ್ ಸಂಖ್ಯೆಗಳಿದ್ದು ಅದಕ್ಕೆ ತಕ್ಕಂತೆ ಆನಂತರ ದರ್ಶನ ಟೋಕನ್ ನೀಡಲಾಗುತ್ತದೆ. ಅಮ್ಮನವರ ಸತ್ಸಂಗ, ಧ್ಯಾನ, ಭಜನೆಯ ನಂತರ ಅಮ್ಮನವರು ದರ್ಶನ ಟೋಕನ್ ನ ಸರದಿಯಂತೆ ಟೋಕನ್ ಹೊಂದಿರುವ ಪ್ರತಿಯೊಬ್ಬರಿಗೂ ಅಮ್ಮನವರು ಅಪ್ಪುಗೆಯ ಅಮೃತಾಲಿಂಗನದ ಅನುಗ್ರಹ ದರ್ಶನ ನೀಡಲಿದ್ದಾರೆ. ದರ್ಶನಕ್ಕೆ ಪುಟ್ಟ ಮಗುವಿಗೂ ಟೋಕನ್ ಪಡೆಯುವುದು ಅವಶ್ಯಕ ಎಂದು ಸುರೇಶ್ ಅಮೀನ್ ಹೇಳಿದರು.

ಧಾರ್ಮಿಕ ಕಾರ್ಯಕ್ರಮಗಳು
ಮೇ 28ರಂದು ಅಮೃತ ಸಂಗಮ: ಯಜ್ಞಶಾಲೆಯಲ್ಲಿ ಬೆಳಿಗ್ಗೆ 5.45ಕ್ಕೆ ಲಲಿತಾ ಸಹಸ್ರನಾಮ ಅರ್ಚನೆ, 7.30ಕ್ಕೆ ರಾಹು ದೋಷ ನಿವಾರಣಾ ಪೂಜೆ ಮತ್ತು 10.30ರಿಂದ ಅಮ್ಮನ ಸತ್ಸಂಗ, ಭಜನೆ, ಧ್ಯಾನ, ವೈಯಕ್ತಿಕ ದರ್ಶನ - ಅಮೃತಾಲಿಂಗನ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿ ಮಹಾಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಮಹಾ ಮೃತ್ಯುಂಜಯ ಹೋಮ, ಮಹಾ ಸುದರ್ಶನ ಹೋಮ, ಅಲಂಕಾರ ಪೂಜೆ, ಮಹಾಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಸುರೇಶ್ ಅಮೀನ್ ವಿವರಿಸಿದರು.
ಮೇ 29ರಂದು ಅಮೃತ ಸಂಗಮ: ಯಜ್ಞಶಾಲೆಯಲ್ಲಿ 5.45ಕ್ಕೆ ಲಲಿತಾ ಸಹಸ್ರನಾಮ ಅರ್ಚನೆ, 7.30ಕ್ಕೆ ಶನಿ ದೋಷ ನಿವಾರಣ ಪೂಜೆ, 10.30ಕ್ಕೆ ಅಮ್ಮನ ಸತ್ಸಂಗ, ಭಜನೆ, ಧ್ಯಾನ, ವೈಯಕ್ತಿಕ ದರ್ಶನ- ಅಮೃತಾಲಿಂಗನ ನಡೆಯಲಿದೆ. ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಮಹಾಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಮಹಾ ಧನ್ವಂತರಿ ಹೋಮ, ಮಹಾ ಸುದರ್ಶನ ಹೋಮ, ಅಲಂಕಾರ ಪೂಜೆ, ದುರ್ಗಾ ಪೂಜೆ ನೆರವೇರಲಿದೆ ಎಂದವರು ತಿಳಿಸಿದರು.

ವಿಶೇಷ ಲೇಖನ ಯಜ್ಞ

ಅಮ್ಮನವರ ಮಂಗಳೂರು ಭೇಟಿ ಮತ್ತು ಬ್ರಹ್ಮಸ್ಥಾನಂ ಮಹೋತ್ಸವದ ಪ್ರಯುಕ್ತ 'ಓಂ ಶಿವ ಶಕ್ತ್ಯೈಕ್ಯ ರೂಪಿಣ್ಯೈ ನಮಃ' ಎಂಬ ಮಂತ್ರದ ಲೇಖನ ಯಜ್ಞದೊಂದಿಗೆ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಹಾಗೂ ಅಮ್ಮನವರಿಗೆ ಭಕ್ತಿಭಾವದ ಕೃತಜ್ಞತೆ ಅರ್ಪಿಸಲಾಗುತ್ತದೆ. ಈ ವಿಶೇಷ ಲೇಖನ ಯಜ್ಞಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದವರು ಹೇಳಿದರು.
ಭಕ್ತರ ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಮಜ್ಜಿಗೆ ಮತ್ತು ಬಿಸ್ಕತ್ ಸೌಲಭ್ಯ ಕಲ್ಪಿಸಲಾಗುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಭೋಜನ ವ್ಯವಸ್ಥೆಯೂ ಇದೆ. ಕಾರ್ಯಕ್ರಮದ ನಂತರ ಮತ್ತು ಅಮ್ಮನ ದರ್ಶನ ಪಡೆದ ನಂತರ ವಿವಿಧ ಸ್ಥಳಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದವರು ವಿವರ ನೀಡಿದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಗೌರವಾಧ್ಯಕ್ಷ ಡಾ. ಜೀವರಾಜ್ ಸೊರಕೆ, ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಗೌರವಾಧ್ಯಕ್ಷರಾದ ಸಿ ಎ ವಾಮನ್ ಕಾಮತ್, ಡಾ. ವಸಂತಕುಮಾರ ಪೆರ್ಲ, ಆಯೋಜನಾ ಸಮಿತಿ ಕಾರ್ಯದರ್ಶಿ ಸಿಎ ರಾಮನಾಥ್, ಡಾ. ದೇವದಾಸ್ ಪುತ್ತರನ್ ಅವರು ಸುದ್ದಿಗೋಷ್ಠಿಯಲ್ಲಿದ್ದರು.