ತುಮಕೂರು: ತುರುವೇಕೆರೆಯಲ್ಲಿ ರಾಗಾ ಚುನಾವಣಾ ಪ್ರಚಾರ ನಡೆಸುವ ವೇಳೆ ಬಿಜೆಪಿ ಚಾಣಾಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಷಾ ತೆಂಗುಸೀಮೆಯಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಸೋಮವಾರ ಗುಬ್ಬಿ , ತಿಪಟೂರು ವಿಧಾನಸಭಾ ಕ್ಷೇತ್ರಗಳಲ್ಲಿ ಷಾ ಅಬ್ಬರಿಸಲಿದ್ದಾರೆ.
ಬೆಂಗಳೂರಿನ ಎಚ್‌ಎಎಲ್ ವಿಮಾನನಿಲ್ದಾಣದಿಂದ ಗುಬ್ಬಿ ಪಟ್ಟಣಕ್ಕೆ ವಿಶೇಷ ಹೆಲಿಕ್ಯಾಪ್ಟರ್‌ನಲ್ಲಿ ಆಗಮಿಸುವ ಅಮಿತ್ ಷಾ ಬೆಳಗ್ಗೆ 11ಕ್ಕೆ ಗುಬ್ಬಿಯಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಚನ್ನಬಸವೇಶ್ವರ ದೇವಸ್ಥಾನದಿಂದ ಸರ್ಕಾರಿ ಆಸ್ಪತ್ರೆವರೆಗೆ 1 ಕಿ.ಮೀ., ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ಪರವಾಗಿ ರೋಡ್ ಶೋನಲ್ಲಿ ಪಾಲ್ಗೊಂಡು ಮತಯಾಚಿಸಲಿದ್ದಾರೆ.
ಮಧ್ಯಾಹ್ನ 12.10ಕ್ಕೆ ಹೆಲಿಕ್ಯಾಪ್ಟರ್ ಮೂಲಕ ತಿಪಟೂರಿಗೆ ತೆರಳಲಿರುವ ಅಮಿತ್ ಷಾ ಮಧ್ಯಾಹ್ನ 12.50 ರಿಂದ ನಗರದ ಐಬಿ ಸರ್ಕಲ್‌ನಿಂದ ಪೈ ಹೋಟೆಲ್‌ವರೆಗೆ 1 ಕಿ.ಮೀ., ರೋಡ್ ಶೋ ನಡೆಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು ಹಾಜರಿರುವರು.