ಮಡಿಕೇರಿ:
ಬಿಜೆಪಿ ಭದ್ರಕೋಟೆ ಅನ್ನಿಸಿಕೊಂಡಿರುವ ಕೊಡಗಿನಲ್ಲಿ ಶುಕ್ರವಾರದ ಅಮಿತ್ ಶಾ ರೋಡ್ ಶೋ ಪಕ್ಷಕ್ಕೆ ಮತ್ತಷ್ಟು ಹುರುಪು ತುಂಬಿದೆ. ಬಿಸಿಲು ಮತ್ತು ಮೋಡದ ಮಿಶ್ರ ವಾತಾವರಣದಲ್ಲಿ ಬೆವರಿಳಿಯುತ್ತಿದ್ದರೂ, ನೆಚ್ಚಿನ ನಾಯಕನ ದರ್ಶನ ಕಾರ್ಯಕರ್ತರ ಉತ್ಸಾಹ ಇಮ್ಮಡಿಸಿದೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಚುನಾವಣಾ ಫಲಿತಾಂಶದ ತನಕ ಕಾಯಬೇಕು.
ಬಿಜೆಪಿಯ ಚುನಾವಣಾ ಚಾಣಕ್ಯ ಎಂದೇ ಬಿಂಬಿತವಾಗಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಶನಿವಾರ ಸಾವಿರಾರು ಕಾರ್ಯಕರ್ತರ ಮಧ್ಯೆ ರೋಡ್ ಶೋ ನಡೆಸಿ ವಾಪಸಾಗಿದ್ದಾರೆ. ಈ ಒಂದು ರೋಡ್ ಶೋ ಬಿಜೆಪಿಗೆ ಸಾಕಷ್ಟು ಉತ್ತೇಜನ ನೀಡಿದೆ ಎಂದೇ ಪಕ್ಷದ ನಾಯಕರು ವಿಶ್ಲೇಷಿಸುತ್ತಿದ್ದಾರೆ. ಮಡಿಕೇರಿಯಲ್ಲಿ ಅಮಿತ್ ಶಾ ನಡೆಸಿದ ಮೋಡಿಯಿಂದ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಹಾಲಿ ಶಾಸಕರು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಬಿಜೆಪಿ ನಾಯಕರ ಪ್ರಕಾರ ಪಕ್ಷ ಈ ಬಾರಿ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಈ ತನಕ ಇಲ್ಲಿ ಅಧಿಕಾರದಲ್ಲಿ ಇದ್ದ ಶಾಸಕರು ಮಾಡಿರುವ ಕೆಲಸ, ಕಳೆದ ಮೂರೂವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಸಾಧನೆ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಯೋಜನೆಗಳನ್ನು ಮುಂದಿಟ್ಟುಕೊಂಡು ಕಾರ್ಯಕರ್ತರು ಮನೆ ಮನೆಗಳಿಗೂ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಈ ಕಾರ್ಯಕರ್ತರಿಗೆ ಮತ್ತಷ್ಟು ಹುರುಪು ತುಂಬಲು ಒಂದು ಶಕ್ತಿ ಬೇಕಿತ್ತು. ಈ ಕೆಲಸ ಅಮಿತ್ ಶಾ ರೋಡ್ ಶೋದಿಂದ ಆಗಿದೆ ಎನ್ನುವುದು ಮುಖಂಡರ ವಾದ.
ರೋಡ್ ಶೋಗೆ ಭಾರಿ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ನೋಡಿ ಅಮಿತ್ ಶಾ ಖುಷಿಯಾದಂತೆ ಇತ್ತು. ಹಾಗಾಗಿಯೇ ಮಾಧ್ಯಮದವರ ಜತೆ ಮಾತನಾಡುವಾಗ ಕೊಡಗಿನಲ್ಲಿ ನಮಗೆ ಪ್ರತಿಸ್ಪರ್ಧಿಗಳೇ ಇಲ್ಲ ಎಂದು ಆತ್ಮವಿಶ್ವಾಸದಲ್ಲಿ ಹೇಳಿದಲ್ಲದೆ, ಗುಡ್ಡಗಾಡಿನ ಈ ಚಿಕ್ಕ ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಜನ ಸೇರಿರುವ ಬಗ್ಗೆ ಖುಷಿಪಟ್ಟರು. ಅಮಿತ್ ಶಾ ಅವರ ಈ ಮೆಚ್ಚುಗೆ ಮತ್ತು ಆತ್ಮ ವಿಶ್ವಾಸದ ಮಾತುಗಳು ಚುನಾವಣಾ ಅಖಾಡದಲ್ಲಿ ಇರುವ ಇಬ್ಬರು ಶಾಸಕರ ಮನೋಬಲ ಹೆಚ್ಚಳಕ್ಕೂ ಕಾರಣವಾಗಿದೆ.
ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ಮಡಿಕೇರಿಯಲ್ಲಿ ಅಮಿತ್ ಶಾ ರೋಡ್ ಶೋ ನಡೆಸಿದ್ದರು. ಆ ಸಂದರ್ಭದಲ್ಲೂ ಇದೇ ರೀತಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ರೋಡ್ ಶೋ ದಿಂದಾಗಿ ಆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ಬಂದಿತ್ತು ಎಂದು ಸ್ಮರಿಸಿಕೊಳ್ಳುವ ಸ್ಥಳೀಯ ಬಿಜೆಪಿ ಪ್ರಮುಖರು ಈ ಬಾರಿಯೂ ಆ ಪರಿಸ್ಥಿತಿಯೇ ಪುನಾರವರ್ತನೆ ಆಗಲಿದೆ. ಈ ಚುನಾವಣೆಯಲ್ಲಿ ಗೆಲುವಿನ ಅಂತರ ದಾಖಲೆ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.