ಜಿಲ್ಲೆ

ಅಮಿತ್ ಷಾ-ಡಿಕೆಶಿ ಸಮಾಗಮ, ಶಿವರಾತ್ರಿ ಆಚರಣೆಗೆ ಸಚಿವ ಎಂ.ಬಿ. ಪಾಟೀಲ ಏನಂದ್ರು ಗೊತ್ತಾ?

ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಕಟ್ಟಾ ಕಾಂಗ್ರೆಸ್. ಹೀಗಾಗಿ ಅವರ ಬಿಜೆಪಿ ಸೇರುತ್ತಾರೆಂಬುದೆಲ್ಲವೂ ಊಹಾಪೋಹ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.

ಜಗ್ಗಿ ವಾಸುದೇವ ಅವರು ಪ್ರತಿ ವರ್ಷ ಈಶಾ ಫೌಂಡೇಶನ್ ವತಿಯಿಂದ ಶಿವರಾತ್ರಿಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ಬಾರಿ ಅಮಿತ್ ಷಾ ಹಾಗೂ ಡಿ.ಕೆ. ಶಿವಕುಮಾರ ಅವರನ್ನು ಕರೆಯಿಸಿದ್ದಾರೆ. ಇದೊಂದು ಧಾರ್ಮಿಕ ಕಾರ್ಯಕ್ರಮ. ಬಿಜೆಪಿ ಕಾರ್ಯಕ್ರಮವಲ್ಲ. ಹೀಗಾಗಿ ರಾಜಕೀಯ ಊಹಾಪೋಹಗಳಿಗೆ ಅವಕಾಶ ಬೇಡ ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಜಗ್ಗಿ ವಾಸುದೇವ ಅವರು ಅಮಿತ್ ಷಾ ಹಾಗೂ ಡಿ.ಕೆ. ಶಿವಕುಮಾರ ಅವರನ್ನು ಕರೆಯಿಸಿದ್ದಾರೆ. ಡಿ.ಕೆ. ಶಿವಕುಮಾರ ಅವರಿಗೆ ತಮ್ಮ ನಂಬಿಕೆಗೆ ಅನುಗುಣವಾಗಿ ಸಂಪ್ರದಾಯಗಳನ್ನು ಆಚರಿಸಲು ಅವಕಾಶವಿದೆ. ಈ ದೇಶದ ಸಂವಿಧಾನ ಎಲ್ಲರಿಗೂ ಅವರವರ ನಂಬಿಕೆ ಅನುಗುಣವಾಗಿ ಬದುಕಲು ಅವಕಾಶ ಕಲ್ಪಿಸಿದೆ. ವ್ಯಕ್ತಿ ಸ್ವಾತಂತ್ರೃ ಇದೆ. ನನ್ನ ವೈಯಕ್ತಿಕ ಆಚರಣೆಯೇ ಬೇರೆ ರಾಜಕೀಯವೇ ಬೇರೆ ಎಂದರು.

ಮುಂದುವರಿದು ಡಿ.ಕೆ. ಶಿವಕುಮಾರ ಹಿಂದು ಅಲ್ಲವಾ? ನಾನು ಹಿಂದು ಅಲ್ಲವಾ? ಶಿವರಾತ್ರಿ ಆಚರಿಸಬಾರದಾ? ನಾನು ಸಹ 770 ಅಮರ ಗಣಂಗಳ ಪೂಜೆ ಸಲ್ಲಿಸಿಲ್ಲವಾ? ಹೀಗೆ ಅವರವರ ಆಚಾರ-ವಿಚಾರಗಳಿಗೆ ಗೌರವ ಕೊಡಬೇಕಿರುವುದು ಎಲ್ಲರ ಕರ್ತವ್ಯ. ಅಮಿತ್ ಷಾ ಜೊತೆ ವೇದಿಕೆ ಹಂಚಿಕೊಂಡಿದ್ದರಲ್ಲಿ ತಪ್ಪೇನು? ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ಪಕ್ಷ ಸಂಬಂಧವಿಲ್ಲ. ಹೀಗಾಗಿ ಎಲ್ಲರೂ ಮುಕ್ತವಾಗಿ ಭಾಗವಹಿಸುತ್ತಾರೆ. ಅದೇ ರೀತಿ ಡಿ.ಕೆ. ಶಿವಕುಮಾರ ಭಾಗವಹಿಸಿದ್ದಾರೆಂದರು.