ಮೈಸೂರು: ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಬೆಲೆ ಏರಿಕೆ ಬಿಸಿಯ ನಡುವೆಯೂ ಭರ್ಜರಿ ವ್ಯಾಪಾರ-ವಹಿವಾಟು ನಡೆಯಿತು.
ನಗರದ ಪ್ರಮುಖ ಮಾರುಕಟ್ಟೆ, ರಸ್ತೆ, ವೃತ್ತಗಳಲ್ಲಿ ಹೂ, ಬೂದಕುಂಬಳ ಕಾಯಿ, ನಿಂಬೆಹಣ್ಣು, ಬೇಕರಿಗಳಲ್ಲಿ ಸಿಹಿ ತಿನಿಸುಗಳ ಮಾರಾಟ ಭರ್ಜರಿಯಾಗಿ ಸಾಗಿದೆ.
ಆಯುಧಪೂಜೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಯಲ್ಲಿ ಜನರು ಹೆಚ್ಚು ಜನ ಸೇರಿರುವುದರಿಂದ ದೇವರಾಜ ಮಾರುಕಟ್ಟೆ, ವಾಣಿವಿಲಾಸ, ಮಂಡಿ ಮಾರುಕಟ್ಟೆ, ನಂಜುಮಳಿಗೆ, ಎಂ.ಜಿ.ರಸ್ತೆ ಮಾರುಕಟ್ಟೆ, ಧನ್ವಂತ್ರಿ ರಸ್ತೆ, ಆಗ್ರಹಾರ ವೃತ್ತ, ಆರ್‌ಎಂಸಿ, ವಿನೋಬಾ ರಸ್ತೆ, ಸಯ್ಯಜಿರಾವ್ ರಸ್ತೆ, ಜೆಕೆ ಮೈದಾನ ಸೇರಿದಂತೆ ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ವ್ಯಾಪಾರ -ವಹಿವಾಟು ನಡೆಯಿತು.
ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ಭೇಟಿ ನೀಡಿದ ಸಾರ್ವಜನಿಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಯಲ್ಲಿ ತೊಡಗಿದ್ದು, ಜನಜಂಗುಳಿ ಹೆಚ್ಚಾಗಿತ್ತು. ನಗರದ ಹೃದಯಭಾಗಗಳ ಎಲ್ಲ ರಸ್ತೆಗಳಲ್ಲಿಯೂ ಪೊಲೀಸರು ವಾಹನ ನಿಯಂತ್ರಣಕ್ಕೆ ಪರದಾಡಿದರು.
ಹಬ್ಬಕ್ಕೆ ದುಬಾರಿಯಾದ ಹೂ:
ಸಾಮಾನ್ಯ ದಿನಗಳಲ್ಲಿ ಮಾರಿಗೆ 30ರಿಂದ 60 ರೂ.ವರೆಗೆ ಮಾರಾಟವಾಗತ್ತಿದ್ದ ಹೂ ದರ ದ್ವಿಗುಣಗೊಂಡಿತ್ತು. ಮಾರು ಹೂ 80 ರೂ.ನಿಂದ 150 ರೂ. ವರೆಗೆ ಏರಿಕೆ ಕಂಡಿತ್ತು.
ಅಲ್ಲದೆ ಹೂವಿನ ಗುಣಮಟ್ಟ, ಬಣ್ಣ ಮತ್ತು ಆಕಾರದ ಮೇಲೆ ಬೆಲೆ ನಿಗದಿ ಮಾಡಲಾಗಿತ್ತು. ಮಲ್ಲಿಗೆ ಕೆಜಿಗೆ 1000 ರೂ., ಕನಕಂಬಾರ 2000, ಮರಲೆ 700, ಸುಗಂಧರಾಜ 400, ಕಾಕಡ 600, ಗಣಗಲೆ 400, ಗುಲಾಬಿ 250 ರೂ., ಚೆಂಡು ಹೂ 50-60 ರೂ.ಗೆ ಬಿಕರಿಯಾಯಿತು.
ಹೂವುಗಳು ಹಬ್ಬದ ಹಿನ್ನೆಲೆಯಲ್ಲಿ ಸಾಮಾನ್ಯ ದಿನದ ಬೆಲೆಗಿಂತ ದುಪ್ಪಟ್ಟಾಗಿದ್ದವು. ಬಾಳೆ ಹಣ್ಣಿಗೆ ಪ್ರತಿ ಕೆಜಿಗೆ 10-15 ರೂ. ವರೆಗೆ ಏರಿಕೆಯಾಗಿದ್ದು, ಹಣ್ಣಿನ ಗುಣಮಟ್ಟದ ಮೇಲೆ 80-100 ರೂ.ವರೆಗೆ ಮಾರಾಟವಾಯಿತು. ತರಕಾರಿಗಳ ಬೆಲೆ ಹೆಚ್ಚು ಏರಿಕೆಯಾಗದಿದ್ದರಿಂದ ಜನ ಸಾಮಾನ್ಯರು ನಿಟ್ಟುಸಿರು ಬಿಟ್ಟರು.
ಆಯುಧ ಪೂಜೆಗೆ ಪ್ರಮುಖವಾಗಿ ಬೇಕಾಗಿರುವ ಬೂದುಗುಂಬಳ ಮತ್ತು ನಿಂಬೆ ಹಣ್ಣಿಗೆ ಭಾರೀ ಬೇಡಿಕೆ ಕಂಡು ಬಂತು. ಮಾರುಕಟ್ಟೆ, ವೃತ್ತಗಳು ಮತ್ತು ರಸ್ತೆ ಬದಿಗಳಲ್ಲಿ ಬೂದುಗುಂಬಳ ಕಾಯಿಯೇ ಆವರಿಸಿಕೊಂಡಿತ್ತು. ಎಲ್ಲೆಲ್ಲಿಯೂ ಬೂದುಗುಂಬಳ ರಾಶಿಯೇ ಕಂಡು ಬಂತು. ಕಳೆದ ಎರಡು ಮೂರು ದಿನಗಳ ಹಿಂದೆಯೇ ಕಾಯಿಗಳನ್ನು ಪ್ರಮುಖ ರಸ್ತೆ, ವೃತ್ತಗಳಲ್ಲಿ ತಂದು ಗುಡ್ಡೆ ಹಾಕಿದ್ದ ರೈತರು ಭರ್ಜರಿ ವ್ಯಾಪಾರ ನಡೆಸಿದರು. ಬೂದುಗುಂಬಳ ಪ್ರತಿ ಕೆಜಿಗೆ 50-60 ರೂ.ಗೆ ಮಾರಾಟ ನಡೆಯಿತು.
ಆಯುಧ ಪೂಜೆಗೆ ಬೇಕಾಗಿರುವ ಬಾಳೆ ಕಂದು, ಮಾವಿನ ಎಲೆಗಳು ಸಹ ನಿಗಧಿತ ಬೆಲೆಗೆ ಮಾರಾಟವಾದವು. ಬಾಳೆಕಂದು 2ಕ್ಕೆ 30 ರೂ.ಗೆ ಮಾರಾಟವಾಯಿತು. ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದ ಸ್ವೀಟ್ ಅಂಗಡಿಗಳಲ್ಲಿ ಜನಜಂಗುಳಿ ಕಂಡು ಬಂತು.
ನಿಂಬೆ ಹಣ್ಣು ಗಾತ್ರಕ್ಕೆ ತಕ್ಕಂತೆ 10 ರೂ.ಗೆ ಎರಡು ಮತ್ತು ಮೂರು ದೊರೆಯಿತು. ವಿಭೂತಿ, ಅರಿಶಿಣ-ಕುಂಕುಮ, ಧೂಪ ಸೇರಿದಂತೆ ಪೂಜಾ ಸಾಮಾಗ್ರಿಗಳು ಸಹ ತುಟ್ಟಿಯಾಗಿದ್ದವು.
ಸ್ವೀಟ್ ಮಳಿಗೆಗಳು ಸಹ ಭರ್ಜರಿ ವ್ಯಾಪಾರ ವಹಿವಾಟು ನಡೆಸಿದವು. ಗಾರೆ ಕೆಲಸದವರು ಸೇರಿದಂತೆ ಹಲವರು ಬಟ್ಟೆಗಳನ್ನು ಉಡುಗೊರೆ ಕೊಡುವುದರಿಂದ ಬಟ್ಟೆ ಅಂಗಡಿಗಳಲ್ಲೂ ಜನಜಂಗುಳಿ ಇತ್ತು.