ಕಾರವಾರ: ಜೊಯಿಡಾದ ಕುಗ್ರಾಮದ ಅಣಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಮೆರಿಕದ ಡಾಲರ್ ಕೊಡುಗೆ ಸಿಕ್ಕಿದೆ.!! ಹೌದು, ಅಲ್ಲಿನ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ಅವರು ಬರೆದ "ಇಸ್ಕೂಲು" ಎಂಬ ಪುಸ್ತಕವನ್ನು ಓದಿದ ಅಮೆರಿಕದ ಹರಟೆ ಕಟ್ಟೆಯ ಕನ್ನಡಿಗರು ಎಂಬ ತಂಡದ ಸದಸ್ಯರು ಸೇರಿ 125 ಡಾಲರ್ (10500 ರೂ.)ಶಾಲೆಗಾಗಿ ಕಳಿಸಿ ಕೊಟ್ಟಿದ್ದಾರೆ.
ಬುಡಕಟ್ಟು ಕುಣಬಿ ಸಮುದಾಯದ ಮಕ್ಕಳೇ ಇರುವ ಅಣಶಿ ಶಾಲೆಯಲ್ಲಿ ಶಿಕ್ಷಕರಾಗಿರುವ ಅಕ್ಷತಾ ಕೃಷ್ಣಮೂರ್ತಿ ಅವರು ಈ ಶಾಲೆಯ ಮಕ್ಕಳ ಜತೆಗಿನ ಸಂವನ, ಕಲಿಕೆಯ ಸವಾಲುಗಳ ಬಗ್ಗೆ "ಸರ್ಕಾರಿ ಶಾಲೆಯ ಟೀಚರ್ ಹೇಳುವ ಕತೆ" ಎಂಬ ಟ್ಯಾಗ್‌ಲೈನ್‌ನಲ್ಲಿ `ಇಸ್ಕೂಲು' ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ.
ಅದನ್ನು ಓದಿ ಇದುವರೆಗೆ ಅವರ ಶಾಲೆಗೆ ರಾಜ್ಯ, ಹೊರ ರಾಜ್ಯಗಳಿಂದ ಸುಮಾರು 3 ಲಕ್ಷದವರೆಗೂ ಅನುದಾನ ಹರಿದು ಬಂದಿದೆ. ಅವರ ಪುಸ್ತಕ ಓದಿದ ಬೆಂಗಳೂರಿನ ಸಂಜಯ ಎಂಬ ಇಂಜಿನಿಯರ್ ಅಣಶಿ ಶಾಲೆಗೆ ಬಂದು ಹೋಗಿದ್ದರು. ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ ಸಂಜಯ ಅವರು ಅಣಶಿ ಶಾಲೆ ಹಾಗೂ ಶಿಕ್ಷಕಿ ಅಕ್ಷತಾ ಅವರ ಬಗ್ಗೆ ಅಲ್ಲಿನ ಹರಟೆ ಕಟ್ಟೆಯ ಕನ್ನಡಿಗರ ಬಳಗದಲ್ಲಿ ಹಂಚಿಕೊಂಡಿದ್ದರು. ಅಲ್ಲಿಯೂ ಪುಸ್ತಕದ ಬಗ್ಗೆ ಚರ್ಚೆಯೂ ನಡೆದಿದ್ದು, ಹರಟೆ ಕಟ್ಟೆ ಕನ್ನಡಿಗರ ಬಳಗ ಸಂಜಯ್ ಅವರ ಮೂಲಕ ಡಾಲರ್‌ಗಳನ್ನು ಅಣಶಿಗೆ ಕಳಿಸಿಕೊಟ್ಟಿದೆ.
"ಶಾಲೆಗೆ ಸತ್ಯಸಾಯಿ ಟ್ರಸ್ಟ್ ನೀಡುವ ಕ್ಲೀನ್, ಗ್ರೀನ್ ಎಕ್ಸಲೆನ್ಸ್ ಅವಾರ್ಡ್ ಕೂಡ ಸಿಕ್ಕಿದೆ. ಆ ಹಣ ಹಾಗೂ ಅಮೇರಿಕನ್ ಕರೆನ್ಸಿ ಬಳಸಿಕೊಂಡು ಶಾಲೆಗೆ ಹೊಸ ಖುರ್ಚಿಗಳನ್ನು ಖರೀದಿಸುವ ಯೋಜನೆ ಹೊಂದಿದ್ದೇನೆʼ ಇದುವರೆಗೆ ಶಾಲೆಗೆ ಬಂದ ಅನುದಾನದಿಂದ ಡಿಜಿಟಲ್ ಬೋರ್ಡ್ ಸೇರಿ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದೇನೆ ಎನ್ನುತ್ತಾರೆ ಅಕ್ಷತಾ ಕೃಷ್ಣಮೂರ್ತಿ ಅವರು. ದಾನಿಗಳಿಂದ ದೇಣಿಗೆ ಪಡೆದು, ಸರ್ಕಾರದ ಅನುದಾನ ಪಡೆದು ಉತ್ತಮ ಗ್ರಂಥಾಲಯವನ್ನೂ ಶಾಲೆಯಲ್ಲಿ ಇದೇ ಶಿಕ್ಷಕಿ ಮಾಡಿದ್ದಾರೆ. ಸುಮಾರು 4 ಸಾವಿರ ಪುಸ್ತಕಗಳಿವೆ.
ದಾಂಡೇಲಿ,ಅಣಶಿ ಸಂರಕ್ಷಿತ ಅಭಯಾರಣ್ಯಕ್ಕೆ ಪ್ರವಾಸಕ್ಕೆ ಬಂದಿದ್ದ ಪೋಲ್ಯಾಂಡ್ ದೇಶದ ಎಲಿಜೆಬೆತ್ ಹಾಗೂ ಮ್ಯಾಸಿಜ್ ದಂಪತಿ ಅಣಶಿ ಶಾಲೆಯನ್ನು ಸಂದರ್ಶಿಸಿದ್ದರು. ಕನ್ನಡ ಎಂಬ ಒಂದು ಭಾಷೆ ಇದೆ ಎಂಬುದೇ ಗೊತ್ತಿಲ್ಲದ ದಂಪತಿ ಇಲ್ಲಿರುವ ಕನ್ನಡ ಪುಸ್ತಕಗಳ ಸಂಗ್ರಹ ನೋಡಿ ಅಚ್ಚರಿಯಾದರು. ಮಕ್ಕಳ ಜತೆ ಮಾತನಾಡಿ ಖುಷಿಯಾದರು. ಅವರು ಶಾಲಾ ಗ್ರಂಥಾಲಯಕ್ಕೆ 2 ಸಾವಿರ ರೂ. ಕೊಡುಗೆ ನೀಡಿ ಹೋಗಿದ್ದರು.
ನಾನು ಬರೆದ ಅಕ್ಷರದಿಂದಾಗಿ ನನ್ನ ಶಾಲೆಗೆ ಇಷ್ಟೊಂದು ಸೌಲಭ್ಯ ಸಿಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಮತ್ತು ಅದರಿಂದ ನನ್ನ ಶಾಲೆಗೆ ಶಾಶ್ವತ ಸೌಲಭ್ಯಗಳನ್ನು ಕಲಿಸಿದ ಸಮಾಧಾನ ಸಿಗುತ್ತಿದೆ ಅಕ್ಷತಾ ಕೃಷ್ಣಮೂರ್ತಿ ಶಿಕ್ಷಕಿ, ಲೇಖಕಿ