ಜಿಲ್ಲೆ

ತುಮಕೂರು ಹೈದನಿಗೆಅಮೆರಿಕಾ ವಿವಿಯ 3.8 ಕೋ.ರೂ., ಫೆಲೋಶಿಪ್ !

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಅಮೆರಿಕಾದ ಪೆನಿಸಲ್‌ವೇನಿಯಾ ವಿಶ್ವವಿದ್ಯಾಲಯದಲ್ಲಿ ಜೈವಿಕ ಇಂಜಿನಿಯರಿಂಗ್‌ನಲ್ಲಿ ಪಿ.ಎಚ್‌ಡಿ., ಅಧ್ಯಯನಕ್ಕಾಗಿ ತುಮಕೂರಿನ ಯಶವಂತ್ ಮಹೇಶ್ 3.8 ಕೋ.ರೂ., ಫೆಲೋಶಿಪ್ ಪಡೆದುಕೊಂಡಿದ್ದಾರೆ.

ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಕೆಂಬಳಲು ಗ್ರಾಮದ ಕೃಷಿ ಹಿನ್ನೆಲೆಯ ಯಶವಂತ್ ಮಹೇಶ್ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜೈವಿಕ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದು ಸದ್ಯ ಬೆಂಗಳೂರಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಯಶವಂತ್ ಅಧ್ಯಯನ ನಡೆಸುತ್ತಿದ್ದಾರೆ. ಇದೀಗ ಪಿ.ಎಚ್‌ಡಿ., ( ಡಾಕ್ಟರ್ ಆಫ್ ಫಿಲಾಸಪಿ) ಅಧ್ಯಯನಕ್ಕೆ ಬುಧವಾರ ಅಮೆರಿಕಾಕ್ಕೆ ಹಾರಲಿರುವ ಯಶವಂತ್ 5 ವರ್ಷಗಳ ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲಿದ್ದಾರೆ.

ಬಾಲ ವಿಜ್ಞಾನಿ ಶ್ರೇಯ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಸಿಟಿಜನ್ ಹೈಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾಗಲೇ ಯಶವಂತ್ ಮಂದಾರ ಎಲೆಗಳಲ್ಲಿ ಔಷಧ ಪತ್ತೆ ಹಚ್ಚಿದ್ದಲ್ಲದೇ 2013ರಲ್ಲಿ ಅಮೆರಿಕಾದಲ್ಲಿ ನಡೆದಿದ್ದ ಇಂಟೆಲ್ ಇಂಟರ್ ನ್ಯಾಷನಲ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ಫೇರ್‌ನಲ್ಲಿ (ಐಎಸ್‌ಇಎಫ್) ರಾಜ್ಯವನ್ನು ಪ್ರತಿನಿಧಿಸಿದ್ದರು. ರಾಜ್ಯ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ನೀಡುವ ಬಾಲ ವಿಜ್ಞಾನಿ ಶ್ರೇಯಕ್ಕೆ ಪಾತ್ರರಾಗಿದ್ದರು. ಅದಾದ ಬಳಿಕ ಇಂಟೆಲ್ ಫೌಂಡೇಷನ್‌ನಿಂದ ಅವಿಷ್ಕಾರ್ ಪ್ರಶಸ್ತಿಗೆ ಭಾಜನರಾಗಿದ್ದರು.

ಅಮೆರಿಕಾದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಪೆನಿಸಲ್‌ವೇನಿಯಾ ವಿಶ್ವವಿದ್ಯಾಲಯವು ಜಗತ್ತಿನ ಶ್ರೇಷ್ಠ ವೈದ್ಯಕೀಯ ಸಂಶೋಧನಾ ಕೇಂದ್ರಗಳಲ್ಲೊಂದು. ಕರೊನಾ ಲಸಿಕೆ ಕಂಡು ಹಿಡಿದ ಬಯೋ ಇಂಜಿನಿಯರಿಂಗ್ ವಿಭಾಗದಲ್ಲೇ ಪಿ.ಎಚ್‌ಡಿ., ಅಧ್ಯಯನಕ್ಕೆ ತೆರಳುತ್ತಿರುವುದು ವಿಶೇಷವೆನಿಸಿದೆ. ನನ್ನೀ ಸಾಧನೆಗೆ ಶಿವಕುಮಾರಶ್ರೀಗಳು, ಸಿದ್ದಲಿಂಗ ಶ್ರೀಗಳು, ತಾತ ಆರ್.ವೀರಣ್ಣ , ನಮ್ಮ ಕುಟುಂಬದವರ ಆಶೀರ್ವಾದ ಇದೆ. ಯಶವಂತ್ ಮಹೇಶ್ ಪಿ.ಎಚ್‌ಡಿ., ವಿದ್ಯಾರ್ಥಿ

ಸಿದ್ದಗಂಗಾ ಶ್ರೀಗಳ ಆಶೀರ್ವಾದ ನಾರಾಯಣ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಬಳಿಕ 2016ರಲ್ಲಿ ಎಸ್‌ಐಟಿಯಲ್ಲಿ ಜೈವಿಕ ತಂತ್ರಜ್ಞಾನ ಕೋರ್ಸ್ ಸೇರಿದ ಯಶವಂತ್ ತನ್ನಿಷ್ಟದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಉನ್ನತ ಸಾಧನೆಗೆ ಸ್ಫೂರ್ತಿಯಾಯಿತು. ಬೆಂಗಳೂರಿನ ಐಐಎಸ್ಸಿ ಗೆ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿದ ಬಳಿಕ ಅಮೆರಿಕಾದ ಪೆನಿಸಲ್‌ವೇನಿಯಾ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ., ಕನಸು ಕಟ್ಟಿಕೊಂಡಿದ್ದರು.